ಫ್ರೀಡಂ 251: ರಿಂಗಿಂಗ್ ಬೆಲ್ ಕಂಪನಿ ವಿರುದ್ಧ 420 ಪ್ರಕರಣ

ಗುರುವಾರ, 24 ಮಾರ್ಚ್ 2016 (10:04 IST)
ವಿಶ್ವದಲ್ಲೇ ಅತ್ಯಂತ ಅಗ್ಗದ ಬೆಲೆಗೆ ಸ್ಮಾರ್ಟ್‌ಫೋನ್ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿದ್ದ ರಿಂಗಿಂಗ್ ಬೆಲ್ ಕಂಪನಿಯ ಹಿರಿಯ ಅಧಿಕಾರಿಗಳ ವಿರುದ್ಧ ನೋಯ್ಡಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
 
ಬಿಜೆಪಿ ಸಂಸದ ಸೋಮಯಾ ಎಂಬುವರು ನೀಡಿರುವ ದೂರಿನ ಆಧಾರದ ಮೇಲೆ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ಲಾಂಚ್ ಮಾಡುತ್ತೇವೆ ಎಂದು ಘೋಷಿಸಿದ್ದ ಕಂಪನಿಯ ಪ್ರವರ್ತಕರಾದ ಮೋಹಿತ್ ಗೋಯಲ್ ಹಾಗೂ ಅಧ್ಯಕ್ಷ ಅಶೋಕ್ ಚಡ್ಡಾ ವಿರುದ್ಧ  ಭಾರತೀಯ ದಂಡ ಸಂಹಿತೆ 420 ಮತ್ತು ಹಾಗೂ ಐಟಿ ಕಾಯ್ದೆ 66 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
 
ಮಿಸ್‌ಲೀಡ್ ಮಾಡುವ ಜಾಹೀರಾತಿನ ಮೂಲಕ ನಿಧಿ ಸಂಗ್ರಹ ಮತ್ತು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಜನರಿಗೆ ತಪ್ಪು ಮಾಹಿತಿ ನೀಡಿರುವ ಕಂಪನಿ ಅತಿ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿ ಜನರಿಗೆ ವಂಚನೆ ಮಾಡುತ್ತಿದೆ. ಅಲ್ಲದೇ, ಜಾಹೀರಾತಿನಲ್ಲಿ ತ್ರಿವರ್ಣ ಬಳಸಲಾಗಿದೆ ಎಂದು ಸೋಮಯಾ ದೂರಿನಲ್ಲಿ ತಿಳಿಸಿದ್ದಾರೆ. 
 
ಈಗಾಗಲೇ ತನಿಖೆ ಆರಂಭವಾಗಿದ್ದು ಮೊಬೈಲ್ ಉತ್ಪಾದನೆಯಾಗುತ್ತಿರುವ ಉತ್ಪಾದನಾ ಘಚಕವನ್ನು ತೋರಿಸುವಂತೆ ಪೊಲೀಸರು ಕಂಪನಿ ಮಾಲೀಕರಿಗೆ ಸೂಚಿಸಿದ್ದಾರೆ. ಒಂದು ವೇಳೆ ಅವರು ಘಟಕಗಳು ಇದ್ದಿದ್ದೇ ಆದರೆ ಅಲ್ಲಿಗೆ ಭೇಟಿ ನೀಡಲಿರುವ ಪೊಲೀಸರು ಎಲ್ಲವನ್ನು ಪರಿಶೀಲಿಸಲಿದ್ದಾರೆ.  
 
ಅನುಮತಿ ಕೋರಿ ಸಲ್ಲಿಸಿದ್ದ ದಾಖಲೆಗಳನ್ನು ಸಹ ಪ್ರಸ್ತುತ ಪಡಿಸುವಂತೆ ಕಂಪನಿ ನಿರ್ದೇಶಕರಿಗೆ ಪೊಲೀಸರು ಸೂಚಿಸಿದ್ದಾರೆ. 
 
‘ಫ್ರೀಡಂ 251’ ಸ್ಮಾರ್ಟ್ ಫೋನ್‌ ಬಗ್ಗೆ ಘೋಷಿಸಿದಾಗ ಗ್ರಾಹಕರು ಆನ್‌ಲೈನ್‌ನಲ್ಲಿ ಮುಗಿಬಿದ್ದು ಬುಕಿಂಗ್ ಮಾಡಿಸಿದ್ದರು. ಕಂಪನಿ ಮೋಸ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದ ಬಳಿಕ ಆದಾಯ ತೆರಿಗೆ ಇಲಾಖೆ, ಪೊಲೀಸ್ ಇಲಾಖೆ ಕಂಪನಿಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು.

ವೆಬ್ದುನಿಯಾವನ್ನು ಓದಿ