ಜಿಎಸ್‌ಟಿ ಬಗ್ಗೆ ತಿಳಿದಿರಬೇಕಾದ ಐದು ಸಂಗತಿಗಳು ಕೆಳಗಿವೆ

ಸೋಮವಾರ, 22 ಡಿಸೆಂಬರ್ 2014 (11:58 IST)
ಈ ಸಂಸತ್ ಅಧಿವೇಶನಕ್ಕೆ ಕೆಲವೇ ದಿನಗಳು ಬಾಕಿವುಳಿದಿರಬಹುದು. ಆದರೆ ನರೇಂದ್ರ ಮೋದಿ ಸರ್ಕಾರ ಸೋಮವಾರ ಸರಕು ಮತ್ತು ಸೇವಾ ತೆರಿಗೆ ಸೃಷ್ಟಿಸುವ ಮಸೂದೆಯನ್ನು ಮಂಡಿಸಲು ದೃಢಸಂಕಲ್ಪ ಮಾಡಿದೆ. ಈ ತೆರಿಗೆಯನ್ನು 2016ರ ಏಪ್ರಿಲ್ ಒಂದರಿಂದ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ.
 
 ಜಿಎಸ್‌ಟಿ ಬಗ್ಗೆ ನಿಮಗೆ ತಿಳಿದಿರಬೇಕಾದ ಐದು ಸಂಗತಿಗಳು ಕೆಳಗಿವೆ. 
 1.ಆರ್ಥಿಕತೆ ಪ್ರಬಲವಾಗಬೇಕಾದರೆ, ಜಿಎಸ್‌ಟಿ ಏಕ ಮತ್ತು ಏಕರೂಪ ತೆರಿಗೆ ರಚನೆಯನ್ನು ಸೃಷ್ಟಿಸುತ್ತದೆ. ಜಿಎಸ್‌ಟಿ ರಾಜ್ಯ ಮತ್ತು ಕೇಂದ್ರದ ಮೇಲೆ ಹೇರುವ ದ್ವಿತೆರಿಗೆಗಳನ್ನು ತೆಗೆದುಹಾಕುತ್ತದೆ. ಸರಕುಗಳು ಮತ್ತು ಸೇವೆಗಳಿಗೆ ಇಡೀ ತೆರಿಗೆ ವ್ಯವಸ್ಥೆಯನ್ನು ದಕ್ಷಗೊಳಿಸುತ್ತದೆ. ಜಿಎಸ್‌ಟಿ ಅತ್ಯಂತ ಮಹತ್ವಾಕಾಂಕ್ಷೆಯ ಪರೋಕ್ಷ ತೆರಿಗೆ ಸುಧಾರಣೆಯಾಗಿದೆ.
 
2. ಜಿಎಸ್‌ಟಿಯ ಅನುಷ್ಠಾನದಿಂದ ದೇಶದಲ್ಲಿ ಅಸ್ತಿತ್ವದಲ್ಲಿರುವ ಬಹು ಪದರಗಳ ತೆರಿಗೆ ವ್ಯವಸ್ಥೆ ರದ್ದಾಗುತ್ತದೆ. ಪ್ರಸ್ತುತ ಆಕ್ಟ್ರಾಯ್, ಕೇಂದ್ರ ಮಾರಾಟ ತೆರಿಗೆ, ರಾಜ್ಯ ಮಟ್ಟದ ಮಾರಾಟ ತೆರಿಗೆ, ಪ್ರವೇಶ ತೆರಿಗೆ, ಸ್ಟ್ಯಾಂಪ್ ಶುಲ್ಕ, ಟೆಲಿಕಾಂ ಪರವಾನಗಿ ಶುಲ್ಕಗಳು, ವಹಿವಾಟು ತೆರಿಗೆ, ವಿದ್ಯುತ್ ಮಾರಾಟ ಅಥವಾ ಬಳಕೆ ತೆರಿಗೆ, ಸರಕು ಸಾಗಣೆ ಮತ್ತು ಸೇವೆ ಮೇಲಿನ ತೆರಿಗೆ ಮುಂತಾದವು ತೆರಿಗೆ ರಚನೆಯನ್ನು ಸಂಕೀರ್ಣಗೊಳಿಸಿದ್ದವು. 
 3.ಈಗ, ಎರಡು ಪ್ರಮುಖ ವಸ್ತುಗಳಾದ ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ಜಿಎಸ್‌ಟಿಯಲ್ಲಿ ಸೇರ್ಪಡೆಯಾಗಿಲ್ಲ.
 
 4) ಜಿಎಸ್‌ಟಿಯನ್ನು ಕೇಂದ್ರ ಮತ್ತು ರಾಜ್ಯ ಸಮಾನ ಪ್ರಮಾಣದಲ್ಲಿ ಸಂಗ್ರಹಿಸುತ್ತದೆ. ಅವು ಸಮಾನ ದರದಲ್ಲಿ ಜಿಎಸ್‌ಟಿ ತೆರಿಗೆ ವಿಧಿಸುತ್ತವೆ. ಉದಾಹರಣೆಗೆ ಸರಕು ಮತ್ತು ಸೇವೆಗಳಿಗೆ ಶೇ. 20 ಜಿಎಸ್‌ಟಿ ಹೇರಿದರೆ, ಕೇಂದ್ರ ಶೇ. 10ರಷ್ಟು ಮತ್ತು ರಾಜ್ಯ ಇನ್ನುಳಿದ ಶೇ. 10ನ್ನು ಸಂಗ್ರಹಿಸುತ್ತದೆ.
 
 5. ಒಂದೊಮ್ಮೆ ಜಿಎಸ್‌ಟಿ ಜಾರಿಯಾದರೆ, ತೆರಿಗೆ ಆಡಳಿತವು ಸರಳೀಕರಣವಾಗುತ್ತದೆ ಮತ್ತು ಉದ್ಯಮಸ್ನೇಹಿಯಾಗುತ್ತದೆ. ಇದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಂಸ್ಥೆಗಳಿಗೆ ಮತ್ತು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿವರಗಳ ಸಲ್ಲಿಕೆಗೆ ಮತ್ತು ತೆರಿಗೆ ಪಾವತಿಗೆ ನೆರವಾಗುತ್ತದೆ. 

ವೆಬ್ದುನಿಯಾವನ್ನು ಓದಿ