ರೈಲ್ವೆಯಲ್ಲಿ ಸರ್ಕಾರದಿಂದ 8. 5 ಲಕ್ಷ ಕೋಟಿ ರೂ. ಹೂಡಿಕೆ

ಗುರುವಾರ, 3 ಸೆಪ್ಟಂಬರ್ 2015 (16:54 IST)
ಬೆಳವಣಿಗೆ ಚೇತರಿಕೆಗೆ ಮೂಲಸೌಲಭ್ಯ ಅಭಿವೃದ್ಧಿ ಕಡೆಗೆ ಗಮನಹರಿಸಲಿರುವ   ಸರ್ಕಾರ ಭಾರತೀಯ ರೈಲ್ವೆಯಲ್ಲಿ 8.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಈ ಕ್ಷೇತ್ರದ ಸ್ವರೂಪವನ್ನು ಬದಲಾಯಿಸಲು ನಿರ್ಧರಿಸಿರುವುದಾಗಿ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.
 
ದೇಶದಲ್ಲಿ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಜಿಎಸ್‌ಟಿ ಮಸೂದೆಯ ಅಂಗೀಕಾರಕ್ಕೆ ನೆರವಾಗುವಂತೆ ಅವರು ವಿರೋಧ ಪಕ್ಷಗಳಿಗೆ ಕರೆ ನೀಡಿದರು. 
ವಾಹನ ಬಿಡಿಭಾಗ ಉತ್ಪಾದಕರ ಸಂಘಟನೆಯ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಿನ್ಹಾ, ಮೂಲಸೌಲಭ್ಯದತ್ತ ಸರ್ಕಾರ ಹೆಚ್ಚು ಗಮನಹರಿಸಿದೆ ಎಂದು ನುಡಿದರು.
 
ಭಾರತೀಯ ರೈಲ್ವೆಯಲ್ಲಿ ಕಳೆದ ಒಂದು ದಶಕದಿಂದ ಬಂಡವಾಳ ಹೂಡಿಕೆ ತಗ್ಗಿದ್ದರಿಂದ ರೈಲ್ವೆಯಲ್ಲಿ ನಾವು 8.5 ಲಕ್ಷ ಕೋಟಿ ಹೂಡಿಕೆಗೆ ನಿರ್ಧರಿಸಿದೆವು. ಇದು ಅಸಾಮಾನ್ಯವಾಗಿದ್ದು, ಭಾರತದಲ್ಲಿ ರೈಲ್ವೆಯ ಸ್ವರೂಪವನ್ನೇ ಬದಲಿಸುತ್ತದೆ ಎಂದು ಹೇಳಿದರು. 
 
ರಸ್ತೆಯ ಮೇಲೆ ಬಂಡವಾಳ ಹೂಡಿಕೆ ಕೂಡ ಈ ವರ್ಷ ದುಪ್ಪಟ್ಟಾಗಿದೆ ಎಂದು ಹೇಳಿದ ಅವರು ಬಂಡವಾಳ ವಿವರಗಳನ್ನು ಒದಗಿಸಲಿಲ್ಲ. ಕಳೆದ ಸಂಸತ್ತಿನ ಅಧಿವೇಶನದಲ್ಲಿ ಜಿಎಸ್‌ಟಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗದ್ದಕ್ಕೆ ಅವರು ತೀವ್ರ ನಿರಾಶೆ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ