ಜನವರಿ, 2016ರಂದು ಜಿಎಸ್‌ಟಿ ಜಾರಿ: ಅರುಣ್ ಜೇಟ್ಲಿ

ಬುಧವಾರ, 27 ಮೇ 2015 (11:53 IST)
ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂಗಿತ ನೀಡಿದ್ದಾರೆ. ಮೋದಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಟಾಗೋರ್ ಹಾಲ್‌‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೇಟ್ಲಿ,  2016ರ ಜನವರಿ ಒಂದರಂದು  ಜಿಎಸ್‌ಟಿಯನ್ನು ಅನುಷ್ಠಾನಕ್ಕೆ ತರುವುದಾಗಿ  ತಿಳಿಸಿದರು. 
 
ಜಿಎಸ್‌ಟಿ ಏಕರೂಪ ತೆರಿಗೆ ಪದ್ಧತಿಯಾಗಿದ್ದು, ಸರಕು ಮತ್ತು ಸೇವೆಗಳ ನುಣುಪಾದ ವರ್ಗಾವಣೆಗೆ ಅವಕಾಶ ನೀಡುತ್ತದೆ. ದೇಶದ ಜಿಡಿಪಿಯನ್ನು 1-1.5% ಹೆಚ್ಚಿಸಲು ಕೂಡ ಇದು ನೆರವಾಗುತ್ತದೆ ಎಂದು ಜೇಟ್ಲಿ ಹೇಳಿದರು.  ಕೇಂದ್ರ ಸರ್ಕಾರವು 2015-16ನೇ ಸಾಲಿನ ಆದಾಯ ತೆರಿಗೆ ಸಂಗ್ರಹಗಳಲ್ಲಿ 14-15% ಹೆಚ್ಚಳವನ್ನು ನಿರೀಕ್ಷಿಸಿದೆ ಎಂದು ಜೇಟ್ಲಿ ಹೇಳಿದರು. 
 
ಪ್ರತಿಪಕ್ಷದ ನೂತನ ನೀತಿಯು ಅಭಿವೃದ್ಧಿಗೆ ತಡೆವಿಧಿಸುವುದಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರೆ ಮುಖಂಡರನ್ನು ಪರೋಕ್ಷವಾಗಿ ಟೀಕಿಸುತ್ತಾ ಜೇಟ್ಲಿ ಹೇಳಿದರು. 
 
 ಕೆಲವು ವರ್ಷಗಳ ಹಿಂದೆ ಹಾಲಿವುಡ್ ನಟನೊಬ್ಬ ಅಮೆರಿಕದಲ್ಲಿ ರಾಜ್ಯವೊಂದರ ಗವರ್ನರ್ ಆಗಿದ್ದರು. ಅವರಿಗೆ ರಾಜಕೀಯ ಎಷ್ಟು ಗೊತ್ತಿದೆ, ರಾಜಕೀಯ ಕಲಿಯುವುದು ಯಾವಾಗ?ಎಂದು ಜನತೆ ಪ್ರಶ್ನಿಸುತ್ತಿದ್ದರು. ಕಾಂಗ್ರೆಸ್ ನಾಯಕರ ಪ್ರಕರಣದಲ್ಲೂ ಅದೇ ಆಗಿದೆ. 2013ರಲ್ಲಿ ಅವರದ್ದೇ ಸರ್ಕಾರ ಅಮೇಥಿಯಲ್ಲಿ ಫುಡ್ ಪಾರ್ಕ್ ಯೋಜನೆಯನ್ನು ರದ್ದು ಮಾಡಿ ಈಗ ನರೇಂದ್ರ ಮೋದಿ ವಿರುದ್ಧ ಆರೋಪ ಹೊರಿಸಿದೆ ಎಂದು ಜೇಟ್ಲಿ ಹೇಳಿದರು. 
 
ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿ ಮಾಡಿದ ಜೇಟ್ಲಿ , ಕಳೆದ 15 ದಿನಗಳಲ್ಲಿ 7.5 ಕೋಟಿ ಜನರು ಅಪಘಾತ ಮತ್ತು ಜೀವವಿಮೆ ಯೋಜನೆಗಳಲ್ಲಿ ನೋಂದಣಿ ಮಾಡಿದ್ದಾರೆ. ಜನ್ ಧನ್ ಯೋಜನೆಯಲ್ಲಿ 15.5 ಕೋಟಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.ನೇರ ನಗದು ವರ್ಗಾವಣೆ ಯೋಜನೆಯಲ್ಲಿ 12.5 ಕೋಟಿ ಜನರು ಈಗಾಗಲೇ ನಗದು ಹಣವನ್ನು ಪಡೆಯಲಾರಂಭಿಸಿದ್ದಾರೆ ಎಂದು ಜೇಟ್ಲಿ ಹೇಳಿದರು. 

ವೆಬ್ದುನಿಯಾವನ್ನು ಓದಿ