ಗೃಹ ಸಾಲ ಬಡ್ಡಿದರ ಇಳಿಕೆ `2022ರ ವೇಳೆಗೆ ಎಲ್ಲರಿಗೂ ಸೂರು'

ಮಂಗಳವಾರ, 10 ಜನವರಿ 2017 (10:59 IST)
ಕೈಗೆಟಕುವ ಮನೆ ವಿಭಾಗದ ಬೆಂಗಳೂರಿನ ಡೆವಲಪರ್‍ಗಳು ಈ ಕೊಂಚ ನಿರಾಳರಾಗಿದ್ದಾರೆ. ಈ ಕ್ಷೇತ್ರವು ವಿವಿಧ ಸವಾಲುಗಳನ್ನು ಎದುರಿಸಿತ್ತಾದ್ದಾಗ್ಯೂ, ಕೈಗೆಟಕುವ ಮನೆಗಳ ಅಭಿವೃದ್ಧಿಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಇದು ಈ ಕ್ಷೇತ್ರದ ಸಾಕಷ್ಟು ಸಂಖ್ಯೆಯ ಬ್ರಾಂಡೆಡ್ ರಿಯಲ್ ಎಸ್ಟೇಟ್ ಡೆವಪರ್‍ಗಳು ಹಾಗೂ ಅವರ ಪ್ರೊಜೆಕ್ಟ್ ಗಳಲ್ಲಿ ಕಾಣಬಹುದಾಗಿದೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ವರ್ಷದ ಸಂದರ್ಭದ ಭಾಷಣದ ಬಳಿಕ, ಈ ಕ್ಷೇತ್ರವು ಭಾರೀ ಉತ್ತೇಜನ ಪಡೆದಿದೆ.
 
ಹೊಸ ವರ್ಷದ ತಮ್ಮ ಭಾಷಣದಲ್ಲಿ ಪ್ರಧಾನಿಯವರು, ಕಡಿಮೆ ಆದಾಯ ವರ್ಗದವರು ಸಾಲ ಪಡೆದುಕೊಳ್ಳಲು ಅನುಕೂಲ ಕಲ್ಪಿಸಿ, ಬಡ್ಡಿದರಗಳನ್ನು ಇಳಿಸಿ ಎಂಬುದಾಗಿ ಬ್ಯಾಂಕ್‍ಗಳಿಗೆ ಕರೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ, ಗೃಹ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಪಾತ್ರವಹಿಸುತ್ತಿರುವ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ), ತನ್ನ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಪ್ರಸ್ತುತವಿದ್ದ 9.1% ನಿಂದ 8.6% ಗೆ ಇಳಿದೆ. ಇದು 8%ನ ಹೊಸ ಎಂಸಿಎಲ್‍ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ಸ್) ಮೇಲೆ 60 ಬೇಸಿಸ್ ಪಾಯಿಂಟ್‍ಗಳನ್ನು ಸೇರ್ಪಡೆಗೊಳಿಸಿದೆ. ಇತರೆ ಬ್ಯಾಂಕ್‍ಗಳಾದ ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಕೂಡಾ ತಮ್ಮ ಮಾನದಂಡ ಸಾಲದ ದರವನ್ನು ಶೇಕಡಾ 0.9ರ ತನಕ ಇಳಿಸಿವೆ. ನೋಟು ಅಪನಗದೀಕರಣದಿಂದಾಗಿ ಬ್ಯಾಂಕ್‍ಗಳಿಗೆ ಅಪಾರ ಪ್ರಮಾಣದ ಠೇವಣಿ ಹರಿದು ಬಂದ ಕಾರಣ, ಪ್ರಧಾನಮಂತ್ರಿಯವರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿದೆ.
 
ದೊಡ್ಡ ಪ್ರಮಾಣದಲ್ಲಿ ಗೃಹ ಸಾಲ ಇಳಿಕೆಯಾಗಿರುವ ಈ ಶುಭ ಸುದ್ದಿಯಿಂದಾಗಿ ಬೆಂಗಳೂರಿನ ಹೊಸ ಖರೀದಿದಾರರಿಗೆ 20-15 ವರ್ಷಗಳ ಗೃಹ ಸಾಲವನ್ನು ಬಯಸುವವರಿಗೆ ತಮ್ಮ ಸಾಲದ ಅವಧಿಯೇ ಕಡಿಮೆಗೊಳ್ಳಲಿದೆ. ಇದು ಗೃಹ ನಿರ್ಮಾಣಕ್ಕೆ ಭಾರೀ ಉತ್ತೇಜನ ನೀಡಲಿದೆ ಮತ್ತು 2022ರ ವೇಳೆಗೆ ಎಲ್ಲರಿಗೂ ಸೂರು ಗುರಿಯನ್ನು ಸಾಧಿಸುವತ್ತ ಉದ್ಯಮ ಸಾಗಲಿದೆ.
 
ಗೃಹ ಸಾಲದಲ್ಲಿ ಭಾರೀ ಇಳಿಕೆಯಾಗಿರುವುದರಿಂದ ಉಂಟಾಗುವ ಪರಿಣಾಮದ ಕುರಿತು ಮಾತನಾಡಿರುವ ಜೆ ಸಿ ಶರ್ಮಾ, ಅಧ್ಯಕ್ಷರು, ಕ್ರೆಡಾಯ್ ಬೆಂಗಳೂರು, ``2022ರ ವೇಳೆಗೆ ಎಲ್ಲರಿಗೂ ಸೂರು ಯೋಜನೆ ಘೋಷಣೆಯಾದಂದಿನಿಂದ ಈ ಗುರಿಯನ್ನು ಸಾಧಿಸಲು ಕೆಲವು ಅಗತ್ಯತೆಗಳ ಕುರಿತು ರಿಯಲ್ ಉದ್ಯಮವು ಬೇಡಿಕೆ ಸಲ್ಲಿಸುತ್ತಿತ್ತು. ಒಂದೇ ಬಾರಿಗೆ ಬಡ್ಡಿದರದ ಭಾರೀ ಇಳಿಕೆಯಂತಹ ಪ್ರೋತ್ಸಾಹವು ಉದ್ಯಮ, ಅದರಲ್ಲೂ ಬೆಂಗಳೂರು ಮಾರುಕಟ್ಟೆ ನಿರೀಕ್ಷಿಸುತ್ತಿದ್ದ ಬೆಳವಣಿಗೆಯಾಗಿದೆ. ಬೆಂಗಳೂರು ನಗರವು ಸಂಭಾವ್ಯ ಮನೆ ಮಾಲೀಕರಿಗಾಗಿ 30 ಪ್ರೊಜೆಕ್ಟ್ ಗಳಲ್ಲಿ 16,300 ಘಟಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಪನಗದೀಕರಣದಿಂದಾಗಿ, ಕ್ಯಾಪಿಟಲ್ ವೆಚ್ಚವು ತಗ್ಗಿದ ಕಾರಣ ಬ್ಯಾಂಕ್‍ಗಳ ಸಾಲ ನೀಡಿಕೆ ಸಾಮಥ್ರ್ಯ ಹೆಚ್ಚಿದೆ. ಮುಂಬರುವ ಬಜೆಟ್‍ನಲ್ಲಿ 30-45 ಲಕ್ಷ ವ್ಯಾಪ್ತಿಯ ಪ್ರೊಜೆಕ್ಟ್ ಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುವ ನಿರೀಕ್ಷೆ ನಮ್ಮದಾಗಿದೆ'' ಎಂದು ಹೇಳಿದರು.
 
ಸರ್ಕಾರದ ವಿವಿಧ ಘೋಷಣೆಗಳು ಉದ್ಯಮಕ್ಕೆ ಹೇಗೆ ಪೂರಕವಾಗಲಿದೆ ಎಂಬುದರ ಕುರಿತು ಮಾತನಾಡಿದ ಸುರೇಶ್ ಹರಿ, ಕಾರ್ಯದರ್ಶಿ, ಕ್ರೆಡಾಯ್ ಬೆಂಗಳೂರು, ``ಹೊಸ ವರ್ಷದ ವೇಳೆ ಬಡ್ಡಿದರದಲ್ಲಿ ಇಳಿಕೆ ಕುರಿತ ಪ್ರಧಾನ ಮಂತ್ರಿಯವರ ಘೋಷಣೆಯಿಂದಾಗಿ ಕೈಗೆಟಕುವ ಗೃಹ ನಿರ್ಮಾಣ ಕ್ಷೇತ್ರಕ್ಕೆ ಭಾರೀ ಉತ್ತೇಜನ ದೊರಕಿದೆ. ರೆರಾ ಬಿಲ್ ಅನ್ನು ಪರಿಚಯಿಸುವ ಜತೆಯಲ್ಲಿ  ಅಪನಗದೀಕರಣ, ಹಿರಿಯ ನಾಗರಿಕರಿಗೆ ವಿಶೇಷ ಯೋಜನೆಗಳು ಹಾಗೂ ಕೈಗೆಟಕುವ ಮನೆಗಳಿಗೆ ವಿಶಿಷ್ಟ ಪ್ರೋತ್ಸಾಹಧನದಿಂದಾಗಿ ಉದ್ಯಮವು ಅಭಿವೃದ್ಧಿಯ ದೊಡ್ಡ ಹೆಜ್ಜೆ ಇಡಲಿದೆ. ಪ್ರೊಜೆಕ್ಟ್ ಗಳಿಗೆ ಉತ್ತಮ ಮೌಲ್ಯ ದೊರಕಲಿದೆ ಮತ್ತು ಇಎಂಐ ಯೋಜನೆಗಳು ಚಾಲ್ತಿಗೊಳ್ಳಲಿವೆ, ಉದ್ಯಮಕ್ಕೆ ನಗದು ಪೂರೈಕೆಯಾಗಲಿದೆ ಮತ್ತು ಪ್ರೊಜೆಕ್ಟ್ ಗಳನ್ನು ಬೇಗನೆ ಪೂರ್ಣಗೊಳಿಸಿ ತ್ವರಿತವಾಗಿ ಹಸ್ತಾಂತರಿಸಬಹುದಾಗಿದೆ. ಇದು ಉದ್ಯಮದ ಬೆಳವಣಿಗೆಗೆ ಭಾರೀ ಉತ್ತೇಜನ ನೀಡಲಿದ್ದು, ಅತ್ತಿಬೆಲೆ, ಹೊಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಕೆಆರ್ ಪುರ, ಕನಕಪುರ ರಸ್ತೆ ಮತ್ತು ತುಮಕೂರು ರಸ್ತೆಯ ಸಮೀಪದ ಅನೇಕ ಕೈಗೆಟಕುವ ಬೆಲೆಯ ಪ್ರೊಜೆಕ್ಟ್ ಗಳಿಗೆ ಅನುಕೂಲವಾಗಲಿದೆ. ದರ ಇಳಿಕೆಯಿಂದಾಗಿ ಭವಿಷ್ಯದಲ್ಲಿ ಇನ್ನಷ್ಟು ಇಂತಹ ಯೋಜನೆಗಳು ಆರಂಭಗೊಳ್ಳಬಹುದು'' ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ