ಕೈಗೆಟುಕುವ ಬೆಲೆಗೆ ಮನೆ ಕೊಂಡುಕೊಳ್ಳುವುದು ಹೇಗೆ?

ಗುರುವಾರ, 22 ಡಿಸೆಂಬರ್ 2016 (12:22 IST)
ಎಲ್ಲರೂ ಕೈಗೆಟುಕುವ ದರದ ಮನೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವಾಂಶದಲ್ಲಿ ಅದನ್ನು ಯಾರೂ ಕಾರ್ಯಗತಗೊಳಿಸುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ವಸತಿ ಯೋಜನೆಗಳು `ಕೈಗೆಟುಕುವ ದರದಲ್ಲಿ’ ಎಂಬ ಘೋಷ ವಾಕ್ಯವನ್ನು ಹೊಂದಿರುತ್ತವೆ. ಆದರೆ, ಬಹುತೇಕ ಜನರಿಗೆ ಈ ವಸತಿ ಅಥವಾ ಮನೆಗಳು ಕೈಗೆಟುಕುವಂತಿರುವುದಿಲ್ಲ. ಆದರೆ, ಕೇಂದ್ರ ಸರ್ಕಾರ ಈ ಕೈಗೆಟುಕುವ ದರ ಎಂಬ ಪರಿಕಲ್ಪನೆಯಲ್ಲಿ 2022 ರ ವೇಳೆಗೆ `ಎಲ್ಲರಿಗೂ ಮನೆ’ ಎಂಬ ಯೋಜನೆಯನ್ನು ರೂಪಿಸಿದೆ. 
 
ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ ಭಾರತದಲ್ಲಿ 2012-17 ನೇ ಅವಧಿಯ ಪಂಚವಾರ್ಷಿಕ ಯೋಜನೆಯಲ್ಲಿ 1.88 ಕೋಟಿಯಷ್ಟು ನಗರ ಪ್ರದೇಶದ ಮನೆಗಳ ಕೊರತೆ ಕಂಡುಬಂದಿದೆ. ಇದರಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯ ಇರುವವರಿದ್ದಾರೆ. ಈ ಕ್ಷೇತ್ರದಲ್ಲಿ ಕಡಿಮೆ ಲಾಭ ಇರುವುದರಿಂದ ಡೆವಲಪರ್‍ಗಳು ಇತ್ತ ಹೆಚ್ಚು ಗಮನ ಹರಿಸುವ ಗೊಡವೆಗೆ ಹೋಗುವುದಿಲ್ಲ.
 
ಕ್ರೆಡಾಯ್ ಬೆಂಗಳೂರು ಕೇಂದ್ರದ ಕಾರ್ಯದರ್ಶಿ ಸುರೇಶ್‍ಹರಿ ಅವರು ಹೇಳುವಂತೆ, `` ಈ ಕೈಗೆಟುಕುವ ದರದ ಮನೆಗಳನ್ನು ನಿರ್ಮಾಣ ಮಾಡುವ ಯೋಜನೆಯಡಿ ಮಾರ್ಚ್ 2012 ಕ್ಕೆ ಪೂರ್ಣಗೊಂಡ 11 ನೇ ಪಂಚವಾರ್ಷಿಕ ಯೋಜನೆಯಡಿ ಪ್ರತಿವರ್ಷ 20 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ, ಅದು ಅಸಾಧ್ಯವಾದ ಪರಿಣಾಮ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಕೇಂದ್ರ/ರಾಜ್ಯ ಸರ್ಕಾರಗಳ ವಸತಿ ನಿಗಮಗಳಿಗೆ ನಗರ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಸಿಗದಿರುವುದು. ಇದರ ಜತೆಗೆ ಯೋಜನೆಗಳನ್ನು ಪರಿಪೂರ್ಣವಾಗಿ ಕಾರ್ಯರೂಪಕ್ಕೆ ತಂದು ಅವುಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿರುವುದರಿಂದ ಈ ಗುರಿ ತಲುಪಲು ಸಾಧ್ಯವಾಗಿಲ್ಲ’’.
 
ಮೂಲಸೌಕರ್ಯಗಳ ಜಾಲವನ್ನು ವಿಸ್ತರಣೆ ಮಾಡಿ ಸುಲಭ ದರದಲ್ಲಿ ಭೂಮಿಯನ್ನು ಒದಗಿಸಿದರೆ ರಿಯಲ್ ಎಸ್ಟೇಟ್ ಅಭಿವೃದ್ಧಿ ಉದ್ಯಮದಲ್ಲಿ ಖಾಸಗಿ ಸಹಭಾಗಿತ್ವವನ್ನು ಆಕರ್ಷಿಸಬಹುದು. ಭಾರತದ 1.21 ಬಿಲಿಯನ್ ಜನಸಂಖ್ಯೆಯಲ್ಲಿ 37.7 ಕೋಟಿಯಷ್ಟು ಜನರು ನಗರ ಪ್ರದೇಶದ ನಿವಾಸಿಗಳಾಗಿದ್ದಾರೆ. ಇದಲ್ಲದೇ, ಪ್ರತಿವರ್ಷ ಒಂದು ಕೋಟಿಗೂ ಅಧಿಕ ಜನರು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2030 ರ ವೇಳೆಗೆ ನಗರ ಪ್ರದೇಶಗಳ ಜನಸಂಖ್ಯೆ 60 ಕೋಟಿಯನ್ನು ತಲುಪುವ ನಿರೀಕ್ಷೆ ಇದೆ.
 
2015 ಮತ್ತು 2031 ರ ನಡುವೆ ನಗರೀಕರಣದ ಪ್ರಮಾಣ ಶೇ. 2.1 ರಷ್ಟು ಹೆಚ್ಚಳವಾಗಲಿದೆ (ಕಾಂಪೌಂಡೆಡ್ ಆನ್ಯುವಲ್ ಗ್ರೋತ್ ರೇಟ್). ಇದು ಚೀನಾಕ್ಕಿಂತ ಎರಡು ಪಟ್ಟು ಹೆಚ್ಚಳ ಎಂದು ಅಂದಾಜಿಸಲಾಗಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಇದೊಂದು ಗಂಭೀರ ವಿಚಾರವಾಗಿದೆ.
 
ಬ್ರಿಗೇಡ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಮುಖ್ಯಕಾಯನಿರ್ವಹಣಾಧಿಕಾರಿ (ವಸತಿ) ಓಂ ಅಹುಜಾ ಅವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ``ಬೆಲೆ ಮತ್ತು ವಿಸ್ತೀರ್ಣದ ಕುರಿತು ಭಾರತ ಸರ್ಕಾರದಿಂದ ಕೈಗೆಟುಕುವ ದರದ ಮನೆ ಬಗ್ಗೆ ಸಮರ್ಪಕ ವ್ಯಾಖ್ಯಾನ ಇಲ್ಲದಿರುವುದು ದುರದೃಷ್ಟಕರ. ಈ ಅಸ್ಪಷ್ಟತೆಯಿಂದಾಗಿ ವಿವಿಧ ಸಂಸ್ಥೆಗಳು ಸಾಮಾನ್ಯ ಜನರಿಗೆ ವಸತಿ ಯೋಜನೆ ಒದಗಿಸಲು ವಿವಿಧ ರೀತಿಯ ಮಾನದಂಡಗಳನ್ನು ಅನುಸರಿಸುತ್ತಿವೆ. ಈ ಸುಲಭ ದರದ ಮನೆಗಳನ್ನು ನೀಡುವ ಡೆವಲಪರ್‍ಗಳಿಗೆ ಕೆಲವು ತೆರಿಗೆ ವಿನಾಯ್ತಿಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಇದು ದೀರ್ಘಕಾಲದವರೆಗೆ ಜಾರಿಯಲ್ಲಿಡಲು ಕಷ್ಟಕರವಾಗಲಿದೆ.’’
 
ಕೈಗೆಟುಕುವ ಮನೆಗಳ ದರಗಳು ಒಂದೊಂದು ನಗರದಲ್ಲಿ ಒಂದೊಂದು ರೀತಿಯಲ್ಲಿರುತ್ತವೆ. ಬೆಂಗಳೂರಿನಲ್ಲಿ 65 ಲಕ್ಷ ರೂಪಾಯಿಗಿಂತ ಕಡಿಮೆ ದರವಿದ್ದರೆ ಅದು ಉತ್ತಮ ಎನಿಸುತ್ತದೆ. ಚೆನ್ನೈನಲ್ಲಿ 50 ಲಕ್ಷ ರೂಪಾಯಿಯಷ್ಟಿದೆ. ಕೇರಳದಲ್ಲಿ ಕಾರ್ಮಿಕರ ವೇತನ ದೇಶದಲ್ಲೇ ಅತಿ ಹೆಚ್ಚು, ಅಲ್ಲಿ ಕೈಗೆಟುಕುವ ಮನೆಯ ದರಗಳೆಂದರೆ 40 ರಿಂದ 45 ಲಕ್ಷ ರೂಪಾಯಿ. ಈ ಹಿನ್ನೆಲೆಯಲ್ಲಿ ಕೈಗೆಟುಕುವ ದರ ಎಂಬುದಕ್ಕೆ ಸೂಕ್ತ ಮತ್ತು ನಿರ್ದಿಷ್ಟ ಅಂಶಗಳನ್ನು ಅಳವಡಿಸಬೇಕೆಂದು ಸಲಹೆ ನೀಡುವ ಸುರೇಶ್ ಹರಿ ಅವರು, ಸಾಮಾನ್ಯವಾಗಿ ಕಡಿಮೆ ಅಥವಾ ಮಧ್ಯಮ ವರ್ಗದ ಆದಾಯ ಇರುವ ಕುಟುಂಬಕ್ಕೆ 600 ರಿಂದ 700 ಚದರಡಿಯ ಮನೆ ಇದ್ದರೆ ಸಾಕಾಗಬಹುದು ಎನ್ನುತ್ತಾರೆ.
 
``ಈ ಕೈಗೆಟುಕುವ ಮನೆಗಳ ದರ 25 ರಿಂದ 35 ಲಕ್ಷ ರೂಪಾಯಿ ಇರಬೇಕು. ಇಂತಹ ಮನೆಗಳಿಗೆ ಸರ್ಕಾರ ನೋಂದಣಿ ಶುಲ್ಕವನ್ನು ಕಡಿಮೆ ಮಾಡುವುದು, ಆಸ್ತಿ ತೆರಿಗೆಯಲ್ಲಿ ರಿಯಾಯ್ತಿ ಮತ್ತು ಮಿತವಾದ ತೆರಿಗೆಗಳನ್ನು ವಿಧಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಅದೇ ರೀತಿ ಇಂತಹ ಮನೆಗಳನ್ನು ನೀಡುವ ಡೆವಲಪರ್ ಸಂಸ್ಥೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೇ ರೀತಿಯ ತೆರಿಗೆ ರಿಯಾಯ್ತಿ ಸೌಲಭ್ಯಗಳನ್ನು ನೀಡುವುದು ಉತ್ತಮ. ರಿಯಾಯ್ತಿ ದರದಲ್ಲಿ ಭೂಮಿಯನ್ನು ಒದಗಿಸುವ ನಿಟ್ಟಿನಲ್ಲೂ ಸರ್ಕಾರ ನಿರ್ಧಾರ ಕೈಗೊಳ್ಳಬೇಕು’’ ಎಂದು ಸುರೇಶ್‍ಹರಿ ಸರ್ಕಾರಕ್ಕೆ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ