ಇಸ್ಲಾಮಿಕ್ ಸ್ಟೇಟ್ ಸಂಸ್ಥೆಗಳ ಜೊತೆ ತೈಲ ವಹಿವಾಟು ಭಾರತ ನಿಷೇಧ

ಮಂಗಳವಾರ, 30 ಜೂನ್ 2015 (20:41 IST)
ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ತೈಲ ಮತ್ತಿತರ ಉತ್ಪನ್ನಗಳ ವಹಿವಾಟು ನಡೆಸುವುದನ್ನು ಭಾರತ ಮಂಗಳವಾರ ನಿಷೇಧಿಸಿದೆ.  ಇರಾಕ್, ಸಿರಿಯಾ ಮತ್ತು ಲಿಬ್ಯಾ ಮುಂತಾದ ತೈಲ ಸಮೃದ್ಧ ರಾಷ್ಟ್ರಗಳಲ್ಲಿ ಸಕ್ರಿಯರಾಗಿರುವ ಉಗ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿಶ್ವಸಂಸ್ಥೆ ನಿರ್ಣಯ ಪಾಲನೆ ದೃಷ್ಟಿಯಿಂದ ಭಾರತ ಮೇಲಿನ ನಿರ್ಧಾರ ಕೈಗೊಂಡಿದೆ. 
 
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಅನುಗುಣವಾಗಿ ತೈಲ ಮತ್ತು ನವೀಕೃತ ತೈಲ ಉತ್ಪನ್ನಗಳು, ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ವಸ್ತುಗಳ ವ್ಯಾಪಾರವನ್ನು ನಿಷೇಧಿಸಲಾಗಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದೆ. 
 
ಸಿರಿಯಾ ಮತ್ತು ಇರಾಕ್‌ನಲ್ಲಿ ಹೊಮ್ಮಿದ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಶೀಘ್ರ ಬೆಳವಣಿಗೆಯಿಂದ ಪಾಶ್ಚಿಮಾತ್ಯ ಶಕ್ತಿಗಳನ್ನು ಚಿಂತೆಗೀಡುಮಾಡಿದ್ದು, ಯೂರೋಪ್‌ನಿಂದ ಮೆಡಿಟರೇನಿಯನ್ ಉದ್ದಕ್ಕೂ ನೆಲೆ ನಿರ್ಮಿಸಬಹುದೆಂಬ ಆತಂಕ ಆವರಿಸಿದೆ. 
 
 ತೈಲದ ಕಳ್ಳಸಾಗಣೆ ಮೂಲಕ ಲಾಭ ಗಳಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಯತ್ನಕ್ಕೆ ತಡೆಯೊಡ್ಡುವಂತೆ ಇರಾಕ್ ಪ್ರಧಾನಿ ಹೈಜರ್ ಅಲ್ ಅಬಾದಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ