ಉಕ್ಕು ಉತ್ಪಾದನೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಬೇಕು: ಮೋದಿ

ಗುರುವಾರ, 2 ಏಪ್ರಿಲ್ 2015 (10:29 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ರಕ್ಷಣಾ ಸಿದ್ಧತೆಗೂ ಉಕ್ಕಿನ ಉತ್ಪಾದನೆಗೂ ಬುಧವಾರ ನಂಟು ಕಲ್ಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಭಾರತ ಚೀನಾಗಿಂತ ಹಿಂದೆ ಉಳಿದಿರುವುದು ಸರಿಯಲ್ಲ ಎಂದು ಹೇಳಿದರು.
 
ನಾವು ಅಮೆರಿಕವನ್ನು ಈ ಕ್ಷೇತ್ರದಲ್ಲಿ ಹಿಂದಿಕ್ಕಿದ್ದೇವೆ. ಚೀನಾ ನಮಗಿಂತ ಮುಂದಿದೆ. ಅವರನ್ನು ಕೂಡ ನಾವು ಹಿಂದಿಕ್ಕಬೇಕು ಎಂದು ಮೋದಿ ವಿಸ್ತರಿತ ಮತ್ತು ಆಧುನೀಕೃತ ರೂರ್ಕೆಲಾ ಉಕ್ಕಿನ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸುತ್ತಾ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು. 
 
ಚೈನಾ ಅತೀ ದೊಡ್ಡ ಉಕ್ಕು  ಉತ್ಪಾದಕ ರಾಷ್ಟ್ರವಾಗಿದ್ದು 700 ದಶಲಕ್ಷ ಟನ್  ಪ್ರಮಾಣದ ಉಕ್ಕು ಉತ್ಪಾದಿಸುತ್ತಿದೆ. ಭಾರತದ 80 ದಶಲಕ್ಷ ಟನ್‌ಗಿಂತ ಇದು 9 ಪಟ್ಟು ಹೆಚ್ಚಾಗಿದೆ.  ಕೇಂದ್ರ ಸರ್ಕಾರ 2025ರೊಳಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿದ್ದು ಜಾಗತಿಕವಾಗಿ ಎರಡನೇ ಅತೀ ದೊಡ್ಡ ಉಕ್ಕು ಉತ್ಪಾದನೆ ರಾಷ್ಟ್ರವಾಗಲಿದೆ ಎಂದು ಮೋದಿ ಹೇಳಿದರು.
 
ಗುಣಮಟ್ಟದ ಉಕ್ಕುಉತ್ಪಾದನೆಯು ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದರು.  ರೂರ್ಕೆಲಾದಲ್ಲಿ ಉತ್ಪಾದಿಸುವ ಉಕ್ಕನ್ನು ದೇಶೀಯ ವಿಮಾನ ವಾಹಕ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಬಳಸಲಾಗುತ್ತದೆ ಎಂದು ಮೋದಿ ಹೇಳಿದರು. 
 
ಮೋದಿ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಪ್ರಬಲವಾದ ಧ್ವನಿ ಎತ್ತಿದರು. ನಾನು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುವಾಗ ಬೇರೆ ರಾಷ್ಟ್ರಗಳಿಗಿಂತ ಹಿಂದುಳಿಯಲು ಸಾಧ್ಯವಿಲ್ಲ.  ಕಚ್ಚಾವಸ್ತುಗಳನ್ನು ಮತ್ತು ಖನಿಜಗಳನ್ನು ರಪ್ತು ಮಾಡುವುದು ನನಗೆ ಇಷ್ಟವಿಲ್ಲ. ನಮ್ಮ ಆರ್ಥಿಕ ಸಾಮರ್ಥ್ಯ ಹೆಚ್ಚಳಕ್ಕೆ ನಾವು ಮೌಲ್ಯಾಧಾರಿತ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಔದ್ಯಮಿಕ ಸಂಸ್ಕೃತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
 
ಇದರಿಂದ ಭಾರೀ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆಗೆ ಚೇತರಿಕೆ ಉಂಟುಮಾಡುವ ಮೂಲಕ ಲಾಭ ಹೆಚ್ಚುತ್ತದೆ. ಕಚ್ಚಾವಸ್ತುಗಳನ್ನು ಮಾರಾಟ ಮಾಡಿ ಭಾರತ 60 ವರ್ಷಗಳಲ್ಲಿ ಮಾಡದ ಸಾಧನೆಯನ್ನು ಉತ್ಪಾದನೆಗೆ ಉತ್ತೇಜಿಸುವ ಮೂಲಕ 10 ವರ್ಷಗಳಲ್ಲಿ ಸಾಧಿಸಲಾಗುತ್ತದೆ ಎಂದು ಮೋದಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ