ಹಸುವಿನ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ

ಗುರುವಾರ, 23 ಫೆಬ್ರವರಿ 2017 (22:39 IST)
ಕರ್ನಾಟಕ ರಾಜ್ಯ ಹಸುವಿನ ಹಾಲು ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ, ಒಟ್ಟಾರೆ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆಯ ಸಚಿವ ಎ, ಮಂಜು ಅವರು ತಿಳಿಸಿದ್ದಾರೆ.
 
ಜಾನುವಾರುಗಳಿಗೆ ಲಸಿಕೆ: ಬೆಂಗಳೂರಿನ ಹೆಬ್ಬಾಳ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅತ್ಯಾಧುನಿಕ ಲಸಿಕಾ ತಯಾರಿಕಾ ಪ್ರಯೋಗಾಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯು ಲಸಿಕೆ ಅಭಿವೃದ್ಧಿ, ತಯಾರಿಕೆ, ಸರಬರಾಜು ಮತ್ತು ರೋಗ ತಪಾಸಣಾ ಕ್ಷೇತ್ರದಲ್ಲಿ ಒಂದು ಅತ್ಯುತ್ತಮವಾದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜಾನುವಾರುಗಳಿಗೆ ತಗಲುವ ರೋಗದ ನಿಯಂತ್ರಣಕ್ಕಾಗಿ ವರ್ಷಕ್ಕೆ 2 ಬಾರಿ ಲಸಿಕೆಯನ್ನು ಹಾಕಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
 
ಜಾನುವಾರುಗಳಿಗೆ 14 ವಿವಿಧ ರೀತಿಯ ರೋಗಗಳು ಕಂಡು ಬಂದಿದ್ದು ಹಿಂದಿನ ದಿನಗಳಲ್ಲಿ ಲಸಿಕೆಗಳನ್ನು ಹೊರ ರಾಜ್ಯಗಳಿಂದ ತರಿಸಿ ಹಾಕಲಾಗುತ್ತಿತ್ತು. ಇದೀಗ ನಮ್ಮ ವಿಜ್ಞಾನಿಗಳು ರಾಜ್ಯದಲ್ಲೇ ಈ ವಿವಿಧ ರೋಗಗಳಿಗೆ ಲಸಿಕೆಗಳನ್ನು ಕಂಡು ಹಿಡಿದಿದ್ದಾರೆ, ಈಗ ನಮ್ಮ ರಾಜ್ಯದ ಲಸಿಕೆಯನ್ನೇ ಜಾನುವಾರುಗಳಿಗೆ ಹಾಕಲಾಗುತ್ತಿದೆ ಎಂದು ಸಚಿವರು ನುಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ