ಕೆಂಪಾಪುರ ಹೆಬ್ಬಾಳ: ಉತ್ತರ ಬೆಂಗಳೂರಿನ ಹಾಟ್‍ಸ್ಪಾಟ್!

ಮಂಗಳವಾರ, 21 ಫೆಬ್ರವರಿ 2017 (17:44 IST)
ಒಂದು ಕಾಲದಲ್ಲಿ ಬೆಂಗಳೂರಿನ ಹೆಬ್ಬಾಳವನ್ನು ಉತ್ತರ ಭಾಗದ ಅಂತ್ಯದ ಗಡಿ ಎಂದೇ ಬಣ್ಣಿಸಲಾಗಿತ್ತು. ಆದರೆ, ಇಲ್ಲಿನ ಬಿರುಸಿನ ವಾಣಿಜ್ಯ ಚಟುವಟಿಕೆಗಳು ಮತ್ತು ಏರುಮುಖದಲ್ಲಿ ಮುನ್ನಡಿ ಇಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದ ಅಭಿವೃದ್ಧಿಯತ್ತ ಸಾಗಿರುವುದನ್ನು ಗಮನಿಸಿದರೆ, ಇಲ್ಲೊಂದು ಎಲ್ಲರೂ ಒಂದೆಡೆ ಸೇರುವ ಪ್ರದೇಶ ಇದೆ ಎಂಬುದನ್ನು ಈಗ ನಂಬುವುದು ಕಷ್ಟ. ಅಲ್ಲದೇ, ಬ್ಯಾಪ್ಟಿಸ್ಟ್ ಆಸ್ಪತ್ರೆ ಮತ್ತು ಚೆಕ್‍ಪೋಸ್ಟ್ ಮಧ್ಯೆ ಇರುವ ಮೈಲುಕಲ್ಲನ್ನು ಬೆಂಗಳೂರು ಕಾರ್ಪೋರೇಷನ್‍ನ ಗಡಿ ಎಂದೇ ಪರಿಗಣಿಸಲಾಗಿತ್ತು. 
 
ಆದರೆ, ಈಗ ಬೆಂಗಳೂರು ನಗರವೆಂಬುದು ಅದರಲ್ಲಿಯೂ ಈ ಹೆಬ್ಬಾಳದ ಸುತ್ತಮುತ್ತಲಿನ ಪ್ರದೇಶ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎನಿಸಿರುವ ಬೆಂಗಳೂರು ನಗರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಈ ಪ್ರದೇಶವೂ ಒಂದಾಗಿದೆ. ಸಹಕಾರ ನಗರ, ಕೊಡಿಗೇಹಳ್ಳಿ ಮತ್ತು ಅಮೃತಹಳ್ಳಿಗೆ ಈ ಹೆಬ್ಬಾಳ ಪ್ರದೇಶ ಹೊಂದಿಕೊಂಡಿದೆ. 
 
ಇದರ ಸನಿಹದಲ್ಲಿಯೇ ಚಿರಂಜೀವಿ ಲೇಔಟ್, ನೀರುಬಾವಿ ಮುನಿರತ್ನಮ್ಮ ಕಾಂಪೌಂಡ್, ಪಂಪ ಎಕ್ಸಟೆನ್ಷನ್, ವೆಂಕಟಗೌಡ ಲೇಔಟ್ ಮತ್ತು ಜಕ್ಕೂರು ಲೇಔಟ್‍ಗಳಿವೆ. ಹೆಬ್ಬಾಳದ ವ್ಯಾಪ್ತಿಯಲ್ಲಿರುವ ಹೆಬ್ಬಾಳ ಫ್ಲೈಓವರ್‍ಗೆ ಅತ್ಯಂತ ಸಮೀಪವಿರುವ ಕೆಂಪಾಪುರ ಹೆಬ್ಬಾಳವೂ ಸಹ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಈ ಕೆಂಪಾಪುರ ಹೆಬ್ಬಾಳ 
ಪ್ರದೇಶ ಫ್ಲೈಓವರ್‍ನ ಬಲಭಾಗದಲ್ಲಿದ್ದು, ಎಸ್ಟೀಂ ಮಾಲ್ ತೀರಾ ಹತ್ತಿರದಲ್ಲಿದೆ.
 
ಮೂಲಸೌಕರ್ಯ ಮತ್ತು ಸಂಪರ್ಕ: ಈ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕ ಅತ್ಯದ್ಭುತ ರೀತಿಯಲ್ಲಿ ಅಭಿವೃದ್ಧಿ ಹೊಂದಿವೆ. ಗ್ಯಾಮನ್ ಇಂಡಿಯಾ ಸಂಸ್ಥೆ ನಿರ್ಮಾಣ ಮಾಡಿರುವ ಫ್ಲೈಓವರ್ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಮತ್ತು ಬಳ್ಳಾರಿ ರಸ್ತೆಯನ್ನು ಸಂಪರ್ಕಿಸುತ್ತದೆ. 
 
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹೆಬ್ಬಾಳವನ್ನು ಸಂಪರ್ಕಿಸುವುದರಿಂದ ಈ ಪ್ರದೇಶ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪ್ರದೇಶದಿಂದ 20 ಕಿಲೋಮೀಟರ್ ದೂರದ ದೇವನಹಳ್ಳಿಯಲ್ಲಿರುವ ವಿಮಾನನಿಲ್ದಾಣಕ್ಕೆ ಯಾವುದೇ ಅಡೆತಡೆ ಇಲ್ಲದೇ ಹೊರವರ್ತುಲ ರಸ್ತೆ ಮತ್ತು ಬಳ್ಳಾರಿ ರಸ್ತೆ ಮೂಲಕ ಸಂಚರಿಸಬಹುದಾಗಿದೆ. ಅದೇರೀತಿ ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಸಿಗುವ ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶಗಳೂ ಸಹ ಅಭಿವೃದ್ಧಿ ವಿಚಾರದಲ್ಲಿ ಉತ್ತಮವಾದ ಪ್ರದೇಶಗಳಾಗಿವೆ. 
 
ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಕೆಂಪಾಪುರ ಹೆಬ್ಬಾಳ ಸ್ಫೋಟಕದ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಇದೇ ರೀತಿಯ ಬೆಳವಣಿಗೆ ಭವಿಷ್ಯದಲ್ಲೂ ಮುಂದುವರೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿಸ್ತರಣೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. 
 
ಎರಡನೇ ರನ್‍ವೇ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣದ ನೀಲನಕ್ಷೆ ಸಿದ್ಧಗೊಳಿಸಲಾಗಿದೆ. ಇದರಿಂದಾಗಿ ಮುಂದಿನ 15 ವರ್ಷಗಳಲ್ಲಿ ವಿಮಾನನಿಲ್ದಾಣ ಪ್ರತಿವರ್ಷ 55 ದಶಲಕ್ಷ ಪ್ರಯಾಣಿಕರನ್ನು ಹೊಂದಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಪರಿಣಾಮ ಮುಂಬರುವ ವರ್ಷಗಳಲ್ಲಿ ಕೆಂಪಾಪುರ ಹೆಬ್ಬಾಳ ಮತ್ತು ಇದರ ಸುತ್ತಮುತ್ತಲಿನ ಪ್ರದೇಶ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆ ಅನಿವಾರ್ಯತೆಯಲ್ಲಿಯೇ ಈ ಪ್ರದೇಶ ಊರ್ದ್ವಮುಖಿಯಾಗಿ ಬೆಳೆಯುವುದರಲ್ಲಿ ಅಚ್ಚರಿ ಇಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ