ಮ್ಯಾಗಿ ನಿಷೇಧಿಸಿದ ಬಳಿಕ ಇನ್‌ಸ್ಟಂಟ್ ನೂಡಲ್ಸ್ ಮಾರಾಟ ಶೇ. 90 ಕುಸಿತ

ಸೋಮವಾರ, 6 ಜುಲೈ 2015 (17:53 IST)
ಮ್ಯಾಗಿ ನಿಷೇಧಿಸಿದ ಒಂದು ತಿಂಗಳಲ್ಲಿ ಭಾರತದಲ್ಲಿ ಇನ್‌ಸ್ಟೆಂಟ್ ನೂಡಲ್ಸ್ ಮಾರಾಟವು 90% ಕುಸಿತ ಅನುಭವಿಸಿದ್ದು, ಮಾಸಿಕ 350 ಕೋಟಿಯಿಂದ 30 ಕೋಟಿ ರೂ.ಗೆ ಕುಸಿದಿದೆ ಎಂದು ಕೈಗಾರಿಕೆ ಅಂದಾಜು ತಿಳಿಸಿದೆ.  

ಮುಖ್ಯವಾದ ನೂಡಲ್ಸ್ ವಿಭಾಗವು  ಅನಿಶ್ಚಿತ ಭವಿಷ್ಯ ಎದುರಿಸಿದ್ದು,ಆಹಾರ ಸಂಸ್ಕರಣೆ ಕೈಗಾರಿಕೆ ಉದ್ಯಮಿಗಳು ಇದು ನಮ್ಮ ಒಟ್ಟಾರೆ ಬಂಡವಾಳ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆಂದು ಅವರು ಚಿಂತೆಗೀಡಾಗಿದ್ದಾರೆ. ಕಂಪೆನಿಗಳು ಸುರಕ್ಷತೆ ತಪಾಸಕರಿಂದ ಹೆಚ್ಚಿದ ಕಿರುಕುಳವನ್ನು ಎದುರಿಸುತ್ತಿದೆ ಎಂದು ಕೈಗಾರಿಕೆ ಸಂಸ್ಥೆ ಅಸೋಚಾಮ್ ಹಿರಿಯ ಅಧಿಕಾರಿ ಹೇಳಿದ್ದಾರೆ. 
 
ಕಳೆದ ಒಂದು ತಿಂಗಳಲ್ಲಿ ಇನ್‌ಸ್ಟೆಂಟ್ ನೂಡಲ್ಸ್ ವಿಭಾಗದ ಮಾರಾಟವು ತಿಂಗಳಿಗೆ 30 ಕೋಟಿ ರೂ.ಗಳಿಗೆ ಭಾರೀ ಕುಸಿತ ಉಂಟಾಗಿದೆ. ಮ್ಯಾಗಿಯನ್ನು ನಿಷೇಧಿಸುವ ಮುಂಚೆ ಈ ವಿಭಾಗವು ವಾರ್ಷಿಕ 4200 ಕೋಟಿ ವಹಿವಾಟು ನೆಡಸಿತ್ತು. ಅಂದರೆ ತಿಂಗಳಿಗೆ ಸುಮಾರು 350 ಕೋಟಿ ರೂ. ಈಗ ಗ್ರಾಹಕರಿಗೆ ಒಂದು ರೀತಿಯ ಮಾನಸಿಕ ಭಯ ಆವರಿಸಿದೆ ಎಂದು ಅಧಿಕಾರಿ ತಿಳಿಸಿದರು. 
 
ಕಳೆದ ತಿಂಗಳ ಆಹಾರ ಸುರಕ್ಷತೆ ನಿಯಂತ್ರಕ ನೆಸ್ಲೆ ಮ್ಯಾಗಿಯನ್ನು ನಿಷೇಧಿಸಿ, ಅದು ಸೇವನೆಗೆ ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ಹೇಳಿತ್ತು. ಮ್ಯಾಗಿಯಲ್ಲಿ ಹೆಚ್ಚಿನ ಪ್ರಮಾಣದ ಸೀಸ ಮತ್ತು ರುಚಿ ವರ್ಧಕ ಮೊನೊಸೋಡಿಯಂ ಗ್ಲುಟಮೇಟ್ ಹೆಚ್ಚಿನ ಪ್ರಮಾಣದಲ್ಲಿತ್ತು. ಈ ಹಿನ್ನೆಲೆಯಲ್ಲಿ ನೆಸ್ಲೆ ಇಂಡಿಯಾ ಮ್ಯಾಗಿಯನ್ನು ಮಾರುಕಟ್ಟೆಯಿಂದ ವಾಪಸ್ ಪಡೆದಿದೆ. 
ಎಫ್‌ಎಸ್‌ಎಸ್‌ಎಐ ಚಾಟಿ ಬೀಸಿದ ನಂತರ, ಎಚ್‌ಯುಎಲ್ ತನ್ನ ನಾರ್ ಚೈನೀಸ್ ನೂಡಲ್ಸ್ ಮತ್ತು ಇಂಡೋ ನಿಸ್ಸಿನ್ ಟಾಪ್ ರಾಮೆನ್ ನೂಡಲ್ಸ್  ಮಾರುಕಟ್ಟೆಯಿುಂದ ವಾಪಸ್ ಪಡೆದಿದೆ. ಮ್ಯಾಗಿ ವಿವಾದದ ಬಳಿಕ ಪ್ಯಾಕೇಜ್ಡ್ ಆಹಾರ ಕಂಪನಿಗಳ  ಮೇಲೆ ಗಮನ ಹೆಚ್ಚಿದ್ದು, ಸಣ್ಣ ಮಟ್ಟದಲ್ಲಿ ಹೆಚ್ಚಿನ ಕಿರುಕುಳ ನೀಡಲಾಗುತ್ತಿದೆ. ಇದರಿಂದ ಕೈಗಾರಿಕೆ ಆತಂಕಗೊಂಡಿದೆ.
 

ವೆಬ್ದುನಿಯಾವನ್ನು ಓದಿ