ಮೇಕ್ ಇನ್ ಇಂಡಿಯಾ: ಡಿ. 29ರಂದು ಮೋದಿ ಕಾರ್ಯಯೋಜನೆ

ಬುಧವಾರ, 24 ಡಿಸೆಂಬರ್ 2014 (12:52 IST)
ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಎರಡನೇ ಹಂತವನ್ನು ರೂಪಿಸುವ ಪ್ರಯತ್ನವಾಗಿ ಪ್ರಧಾನಿ ಮೋದಿ ಡಿ. 29ರಂದು ಅನೇಕ ಹೂಡಿಕೆದಾರರ ಸಭೆಯನ್ನು ಕರೆದಿದ್ದು, ಅಲ್ಲಿ ನಿರ್ದಿಷ್ಟ ಕಾರ್ಯಯೋಜನೆಯನ್ನು ರೂಪಿಸಿ ಉತ್ಪಾದನೆ ಉತ್ತೇಜನಕ್ಕೆ ನೆರವಾಗಲಿದ್ದಾರೆ. 
 
ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ನಿರ್ಮಲಾ ಸೀತಾರಾಮನ್ ಕೂಡ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆ ನಿರ್ಣಾಯಕವಾಗಿದ್ದು, ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮಾಡಲು ಸೂಕ್ತ ಕ್ರಮಗಳ ಅನುಷ್ಠಾನಕ್ಕೆ ನೀಲನಕ್ಷೆಯನ್ನು ರೂಪಿಸಲಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಈ ಸಭೆಯನ್ನು ಆಯೋಜಿಸಿದ್ದು, ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಹಿರಿಯ ಕೈಗಾರಿಕೆ ಮುಖಂಡರು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಮೋದಿ  ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಿದ್ದು, ಜವಳಿ, ವಾಹನೋದ್ಯಮ, ರಾಸಾಯನಿಕ, ಐಟಿ, ಔಷಧಿಗಳು ಮುಂತಾದುವನ್ನು ಗಮನಕೇಂದ್ರೀಕರಿಸುವ ವಿಭಾಗಗಳು ಎಂದು ಗುರುತಿಸಲಾಗಿತ್ತು. 

 
ಉತ್ಪಾದನೆ ವಲಯ ಶೇ. 16-17ರಷ್ಟು ಕೊಡುಗೆ ನೀಡಿದ್ದು, 2022ಕ್ಕೆ ಶೇ. 25ರಷ್ಟು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ ಕೈಗಾರಿಕೆ ಪುನಶ್ಚೇತನದ ಲಕ್ಷಣಗಳು ಮಂದವಾಗಿದ್ದು, ಕೈಗಾರಿಕಾ ಉತ್ಪಾದನೆ ಅಕ್ಟೋಬರ್‌ನಲ್ಲಿ ಶೇ. 4.2ರಷ್ಟು ಕುಸಿತವಾಗಿರುವ ಸಂದರ್ಭದಲ್ಲಿ ಈ ಸಭೆ ಕರೆಯಲಾಗಿದೆ.

ವೆಬ್ದುನಿಯಾವನ್ನು ಓದಿ