ಶೀಮಂತರಿಗೆ ರಿಯಾಯಿತಿ ದರದ ಎಲ್‌ಪಿಜಿ ರದ್ದು: ಜೇಟ್ಲಿ

ಶನಿವಾರ, 22 ನವೆಂಬರ್ 2014 (18:22 IST)
ಶ್ರೀಮಂತ ವರ್ಗದವರಿಗೆ ರಿಯಾಯತಿ ದರದಲ್ಲಿ ಎಲ್‌ಪಿಜಿ ಕೊಡುವುದನ್ನು ನಿಲ್ಲಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹಣಕಾಸು ಸಚಿವರಾದ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಎಚ್‌ಟಿ ಲೀಡರ್‌ಶಿಪ್ ಸಮ್ಮೇಳನದಲ್ಲಿ  ಮಾತನಾಡುತ್ತಿದ್ದ ಅವರು "ನನ್ನಂತ ಜನರಿಗೆ( ಶ್ರೀಮಂತರು) ಸಬ್ಸಿಡಿ ಎಲ್‌ಪಿಜಿ  ನೀಡುವುದು ಯೋಗ್ಯವೋ ಅಥವಾ ಆ ಸೌಲಭ್ಯವನ್ನು ಹಿಂಪಡೆದುಕೊಳ್ಳುವುದೋ ಎಂಬುದರ ಕುರಿತು ಸರಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ" ಎಂದಿದ್ದಾರೆ.
 
ಸಬ್ಸಿಡಿ ದರದ ಎಲ್‌ಪಿಜಿ‌ಯನ್ನು ಪಡೆಯಲು ಯಾರು ಹಕ್ಕುದಾರರು ಎಂಬುದನ್ನು ಶೀಘ್ರದಲ್ಲಿಯೇ ನಿರ್ಣಯಿಸಲಿದ್ದೇವೆ. ಕೆಲವರಿಗೆ ಸಬ್ಸಿಡಿಯಲ್ಲಿ ಎಲ್‌ಪಿಜಿ ನೀಡುವುದು ಸೂಕ್ತವಾಗಿದೆ ಆದರೆ, ಒಟ್ಟಾರೆ ಈ ಎಲ್ಲ ವಿಷಯಗಳು ನಮ್ಮ ಕಾರ್ಯಸೂಚಿಯಲ್ಲಿ ನಿರ್ಣಯವಾಗಲಿವೆ ಎಂದು ಅವರು ಹೇಳಿದ್ದಾರೆ.
 
ಪ್ರಸ್ತುತ, ಪ್ರತಿ ಗ್ರಾಹಕರಿಗೆ  (ದೆಹಲಿ) ವರ್ಷಕ್ಕೆ 12 ಸಿಲಿಂಡರ್‌ಗಳು ಸಬ್ಸಿಡಿ ದರದಲ್ಲಿ  ರೂಪಾಯಿ 414 ದರದಲ್ಲಿ) ಲಭ್ಯವಿದೆ. ಇದನ್ನು ಮೀರಿ ಅವಶ್ಯಕತೆ ಇದ್ದಲ್ಲಿ, 14.2 ಕೆಜಿ ಸಿಲಿಂಡರ್ ಒಂದಕ್ಕೆ 880 ರೂಪಾಯಿ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಬಹುದಾಗಿರುತ್ತದೆ.
 
"ರಾಜಕೀಯ ನಾಯಕತ್ವ, ನಿರ್ದಿಷ್ಟವಾಗಿ ಉನ್ನತ ಸ್ಥರದಲ್ಲಿರುವ ಒಬ್ಬ ವ್ಯಕ್ತಿಯ ಮೇಲೆ ಮಾತ್ರ ಅವಲಂಬಿಸಿದ್ದರೆ, ಅತಿ ಜಟಿಲ ಎನಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಹ ಸರಳವಾಗಿ ಬಿಡುತ್ತವೆ. ಪ್ರಧಾನಿ ಉತ್ತಮ ನಿರ್ಣಯ ನಿರ್ಧರಿಸುವವರಾಗಿದ್ದಲ್ಲಿ ಕಲ್ಲಿದ್ದಲು ಹಂಚಿಕೆ, 2ಜಿ ತರಂಗಾಂತರ ಅಥವಾ ನೈಸರ್ಗಿಕ ಸಂಪನ್ಮೂಲ ಅಥವಾ ಡಿಸೇಲ್ ದರ ಅಥವಾ ಅನಿಲ ದರ ಏರಿಕೆಗಾಗಿ ವರ್ಷಗಳವರೆಗೆ ಕಾಯಬೇಕಾಗಿರಲಿಲ್ಲ" ಎಂದು ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.
 
"ಇಂತಹ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೆಲವು ವರ್ಷಗಳಿಂದ ಕಠಿಣ ಎನಿಸಿಬಿಟ್ಟಿದೆ, ಆದರೆ ಹೊಸ ಸರ್ಕಾರ ಸಮಯ ವ್ಯರ್ಥ ಮಾಡಲು ಇಚ್ಛಿಸುತ್ತಿಲ್ಲ. ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ನಮ್ಮ ಸರಕಾರದ ಪ್ರಮುಖ ಉದ್ದೇಶವಾಗಿದೆ" ಎಂದರು.
 
"ಭಾರತದ ಆರ್ಥಿಕತೆ ನಿರ್ಣಾಯಕ ಹಂತದಲ್ಲಿದೆ ನಿಜ, ಆದರೆ ಜಾಗತಿಕ ಹೂಡಿಕೆದಾರರು ಹೊಸ ಆಸಕ್ತಿಯೊಂದಿಗೆ ಭಾರತದ ಕಡೆ ನೋಡುತ್ತಿದ್ದಾರೆ. ಹೀಗಾಗಿ ನಾವು ನಮ್ಮ ತಾಳ್ಮೆ ಕಳೆದುಕೊಳ್ಳಬಾರದು" ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ