ಅತೀ ಶ್ರೀಮಂತ ಭಾರತೀಯ ಪಟ್ಟ ಮತ್ತೆ ಮುಖೇಶ್ ಅಂಬಾನಿ ಪಾಲು

ಸೋಮವಾರ, 27 ಏಪ್ರಿಲ್ 2015 (19:10 IST)
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಸೋಮವಾರ 19.6 ಶತಕೋಟಿ ಅಮೆರಿಕ ಡಾಲರ್ ನಿವ್ವಳ ಆಸ್ತಿಯೊಂದಿಗೆ  ಜಗತ್ತಿನ ಅತೀ ಶ್ರೀಮಂತ ಭಾರತೀಯ ಸ್ಥಾನವನ್ನು ಮರಳಿ ಗಳಿಸಿದ್ದಾರೆ. ಔಷಧಿ ಉದ್ಯಮಿ ದಿಲೀಪ್ ಶಾಂಘ್ವಿ ಏಳುವಾರಗಳ ತನಕ ಟಾಪ್ ಸ್ಥಾನದಲ್ಲಿದ್ದವರು ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 
ಶಾಂಘ್ವಿ ನೇತೃತ್ವದ ಔಷಧಿ ತಯಾರಿಕೆ ಸಂಸ್ಥೆ ಸನ್ ಫಾರ್ಮಾಗೆ ದುರ್ಬಲ ಮಾರುಕಟ್ಟೆಯಲ್ಲಿ ಷೇರುದರಗಳು ಶೇ. 2ರಷ್ಟು ಕುಸಿದವು. ಆದರೆ ಅಂಬಾನಿ ನೇತೃತ್ವದ ರಿಲಯನ್ಸ್ ಉದ್ಯಮ ಸಮೂಹದ ಷೇರುಗಳು ಶೇ. 0.55ಕ್ಕಿಂತ ಕಡಿಮೆ ಕುಸಿದಿದೆ. 
 
ಇದರ ಫಲವಾಗಿ ಶಾಂಘ್ವಿ ನಿವ್ವಳಮೌಲ್ಯವು 450 ದಶಲಕ್ಷ ಅಮೆರಿಕ ಡಾಲರ್ ಕುಸಿದಿದೆ. ಫೋರ್ಬ್ಸ್ ಒದಗಿಸಿದ ರಿಯಲ್ ಟೈಮ್ ಪರಿಷ್ಕರಣೆಯಲ್ಲಿ ಶಾಂಘ್ವಿ ಇಂದು 19.3 ಶತಕೋಟಿ ಡಾಲರ್ ಆಸ್ತಿಮೌಲ್ಯದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 
 
ಜಾಗತಿಕ ಪಟ್ಟಿಯಲ್ಲಿ ಅಂಬಾನಿ 46ನೇ ಸ್ಥಾನ ಪಡೆದಿದ್ದರೆ, ಶಾಂಘ್ವಿ 48ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರು ಟಾಪ್ 50ರಲ್ಲಿರುವ ಇಬ್ಬರು ಭಾರತೀಯರು. ಜಾಗತಿಕವಾಗಿ ಬಿಲ್ ಗೇಟ್ಸ್ 80.3 ಶತಕೋಟಿ ಅಮೆರಿಕ ಡಾಲರ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅಂಬಾನಿ ಮತ್ತು ಶಾಂಘ್ವಿ ಬಳಿಕ, ಅಜೀಂ ಪ್ರೇಮ್‌ಜಿ, ಲಕ್ಷ್ಮಿ ಮಿಟ್ಟಲ್, ಶಿವ ನಾಡಾರ್, ಕುಮಾರ್ ಮಂಗಳಂ ಬಿರ್ಲಾ, ಉದಯ್ ಕೋಟಕ್, ಸುನಿಲ್ ಮಿಟ್ಟಲ್, ಸೈರಸ್ ಪೂನಾವಾಲ್ ಮತ್ತು ಗೌತಮ್ ಅಡಾನಿ ಅವರು 10 ಅತೀ ಶ್ರೀಮಂತರ ಪೈಕಿ ಸ್ಥಾನ ಪಡೆದಿದ್ದಾರೆ. 
 

ವೆಬ್ದುನಿಯಾವನ್ನು ಓದಿ