ವಂಚನೆ ಪ್ರಕರಣಗಳಿಂದ 12, 620 ಕೋಟಿ ರೂ. ಕಳೆದುಕೊಂಡ ರಾಷ್ಟ್ರೀಕೃತ ಬ್ಯಾಂಕ್‌ಗಳು

ಶುಕ್ರವಾರ, 27 ಮಾರ್ಚ್ 2015 (11:30 IST)
25 ರಾಷ್ಟ್ರೀಕೃತ ಬ್ಯಾಂಕ್‌ಗಳು ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ವಂಚನೆಗಳಿಂದ 12, 620 ಕೋಟಿ ರೂ.ಗಳನ್ನು ಕಳೆದುಕೊಂಡಿವೆ. ಹಣಕಾಸು ಸಚಿವಾಲಯದ ದಾಖಲೆಗಳ ಪ್ರಕಾರ ಇದು ತಿಳಿದುಬಂದಿದೆ.

ಕರ್ನಾಟಕ ಒಂದರಲ್ಲೇ ಮುಖ್ಯಕಚೇರಿ ಹೊಂದಿರುವ ಐದು ಬ್ಯಾಂಕ್‌ಗಳು 2060.75 ಕೋಟಿಯನ್ನು ಕಳೆದುಕೊಂಡಿವೆ.  ಇವು ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು. ಈ ಅವಧಿಯಲ್ಲಿ 4845 ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿರುವ ಬಗ್ಗೆ ದಾಖಲೆಗಳು ಬಹಿರಂಗವಾಗಿದೆ.
 
ಬಹುತೇಕ ಪ್ರಕರಣಗಳಲ್ಲಿ ಬ್ಯಾಂಕ್ ಸಿಬ್ಬಂದಿ ವಂಚಕರ ಜೊತೆ ಕೈಜೋಡಿಸಿದರು ಅಥವಾ ಇನ್ನೂ ಕೆಲವು ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದರು ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ. ಇತ್ತೀಚಿನ ಘಟನೆ ಬುಧವಾರ ಸಂಭವಿಸಿದ್ದು,  ಅಹ್ಮದಾಬಾದ್ ಮೂಲದ ಟೆಲಿಕಾಂ ಕಂಪೆನಿ ಮೇಲೆ ಸಿಬಿಐ ಕೇಸ್ ದಾಖಲು ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ನೀಡಿದ ಜಂಟಿ ದೂರಿನ ಮೇಲೆ ಈ ದೂರನ್ನು ದಾಖಲಿಸಲಾಗಿದೆ.

 ಕಂಪೆನಿಯ ಪ್ರವರ್ತಕ ಕೆಲವು ದಾಖಲೀಕರಣ ಬಾಕಿವುಳಿದಿದ್ದರೂ 40.4 ಕೋಟಿ ರೂ.ಗಳನ್ನು ಮೂರು ಬ್ಯಾಂಕ್‌ಗಳಿಂದ ತುರ್ತಾಗಿ ಪಡೆದಿದ್ದರು.  ಸಾಲ ಮರುಪಾವತಿಗೆ ಸಮಯಾವಕಾಶ ಕೇಳಿ ನಂತರ ಅವರು ನಾಪತ್ತೆಯಾಗಿದ್ದರು. ಪ್ರವರ್ತಕ ನೀಡಿದ ದಾಖಲೆಯಲ್ಲಿ ಸಾಲಪತ್ರಗಳು ಕೂಡ ಇದ್ದು ಅವರು ನಕಲಿಯೆಂದು ತಿಳಿದುಬಂದಿದೆ. ಈ ಸಂಸ್ಥೆಗೆ 86 ಕೋಟಿ ರೂ. ಅವಧಿ ಸಾಲವನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಅದನ್ನು ಕೂಡ ವಂಚಿಸಲಾಗಿದೆ. ಅಂದಾಜು ಒಟ್ಟು 126. 4 ಕೋಟಿ ರೂ. ಬ್ಯಾಂಕ್‌ಗಳಿಗೆ ವಂಚಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ