ಯಾವುದೇ ಹೊಸ ರೈಲುಗಳಿಲ್ಲ, ಪ್ರಯಾಣ ದರ ಏರಿಕೆಯೂ ಇಲ್ಲ

ಗುರುವಾರ, 26 ಫೆಬ್ರವರಿ 2015 (14:53 IST)
ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ಅತೀ ಹೆಚ್ಚು ಹೊಸ ರೈಲುಗಳ ಪ್ರಕಟಣೆಯ  ಮೂಲಕ ಜನಪ್ರಿಯ ಮಾರ್ಗವನ್ನು ಅನುಸರಿಸಲು ನಿರಾಕರಿಸಿದರು.  ಅದೇ ಸಂದರ್ಭದಲ್ಲಿ ಪ್ರಯಾಣ ದರ ಏರಿಕೆಯ ಮೂಲಕ ರೈಲ್ವೆ ಗಳಿಕೆ ಹೆಚ್ಚಿಸುವ ಕ್ರಮಗಳಲ್ಲೂ ವಿಫಲರಾದರು.ಯಾವುದೇ ಹೊಸ ರೈಲು ಮಾರ್ಗಗಳ  ಪ್ರಕಟಣೆಯಿಲ್ಲದೇ ರೈಲ್ವೆ ಸಚಿವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.

ಪ್ರಯಾಣ ದರವನ್ನು ಹೆಚ್ಚಿಸಿ ಪ್ರಯಾಣಿಕರ ಮೇಲೆ ಹೆಚ್ಚು ಹೊರೆ ಹೇರಲಿಲ್ಲ. ಆದರೆ ಹಣ ಕ್ರೋಢೀಕರಣಕ್ಕಾಗಿ ಸರಕು ಸಾಗಣೆ ದರದಲ್ಲಿ ಬದಲಾವಣೆ ಮಾಡಿದರು.ವಾಸ್ತವವಾಗಿ ಅವರು ಯಾವುದೇ ಹೊಸ ರೈಲುಗಳ ಸಂಚಾರವನ್ನು ಪ್ರಕಟಿಸದೇ ಸರಕು ಸಾಗಣೆ ದರಗಳಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿದರು. ಉಪ್ಪನ್ನು ಹೊರತುಪಡಿಸಿ, ಸಿಮೆಂಟ್, ಕಲ್ಲಿದ್ದಲು, ಕೋಕ್, ಉಕ್ಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸರಕು ಸಾಗಣೆ ದರ ಹೆಚ್ಚಿಸಿದರು.

ವಸ್ತುಗಳ ವರ್ಗೀಕರಣ ಮತ್ತು ದೂರದ ಸ್ಲಾಬ್‌ಗಳನ್ನೂ ಬಜೆಟ್‌ನಲ್ಲಿ ನವೀಕರಿಸಿದರು. ಇದರಿಂದ ಕೆಲವು ವಸ್ತುಗಳಲ್ಲಿ ಸರಕು ಸಾಗಣೆ ದರ ಶೇ.10ರಷ್ಟು ಹೆಚ್ಚಲಿದೆ.ರೈಲ್ವೆ ಖಾಸಗೀಕರಣದ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ರೈಲ್ವೆ ಅಮೂಲ್ಯ ರಾಷ್ಟ್ರೀಯ ಆಸ್ತಿಯಾಗಿ ಉಳಿಯುತ್ತದೆ ಮತ್ತು ದೇಶದ ಜನತೆ ರೈಲ್ವೆಯ ಮಾಲೀಕರಾಗಿಯೇ ಇರುತ್ತಾರೆ ಎಂದರು.

ತಮ್ಮ ಒಂದು ಗಂಟೆಯ ಭಾಷಣದಲ್ಲಿ ಪ್ರಭು ರೈಲ್ವೆ ಆರ್ಥಿಕತೆಯ ಮುಖ್ಯ ಚಾಲಕಶಕ್ತಿಯಾಗುವ ಖಾತರಿ ನೀಡಿದರು.  ಹೆಚ್ಚಿನ ಹೂಡಿಕೆಗೆ ಸಂಪನ್ಮೂಲ ಸಂಗ್ರಹ, ರೈಲುಗಳ ವೇಗ ಹೆಚ್ಚಳ, ಪ್ರಯಾಣಿಕರ ಸೌಲಭ್ಯಗಳು ಮತ್ತು ಸುರಕ್ಷತೆಗೆ ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ ನೀಡಿದರು.

ವೆಬ್ದುನಿಯಾವನ್ನು ಓದಿ