2000 ರೂಪಾಯಿ ಹೋಮ್ ಡೆಲಿವರಿ ಮಾಡಲಿದೆ ಸ್ನ್ಯಾಪ್‍ಡೀಲ್

ಗುರುವಾರ, 22 ಡಿಸೆಂಬರ್ 2016 (14:52 IST)
ಅಂತರ್ಜಾಲದಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿ ಮನೆಬಾಗಿಲಿಗೆ ತರಿಸಿಕೊಳ್ಳುವುದು ಈಗ ಸಾಮಾನ್ಯ. ಅದಕ್ಕೆ ಆನ್ಲೈನ್ ಪೇಮೆಂಟ್ ಮಾಡಬಹುದು ಅಥವಾ ಕ್ಯಾಶ್ ಆನ್ ಡೆಲಿವರಿ ಕೂಡ ಆಯ್ದುಕೊಳ್ಳಬಹುದು. 

 
ಆದರೆ ನೋಟು ನಿಷೇಧದ ಬಳಿಕ ಜನ ನಗದಿಗಾಗಿ ಬ್ಯಾಂಕ್, ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಮತ್ತೆ ಕ್ಯಾಸ್ ಆನ್ ಡೆಲಿವರಿ ಪ್ರಶ್ನೆ ಎಲ್ಲಿಯದು?. ಮತ್ತೀಗ ಅಂತರ್ಜಾಲ ಮಾರುಕಟ್ಟೆ ತಾಣವಾದ ಸ್ನ್ಯಾಪ್‍ಡೀಲ್ ನಗದನ್ನೇ ಹೋಮ್ ಡೆಲಿವರಿ ಮಾಡಲು ಮುಂದಾಗಿದ್ದು Cash@Home ಸೇವೆಯನ್ನು ಪರಿಚಯಿಸುತ್ತಿದೆ. 
 
ಈ ಸೇವೆ ನೀಡಲು ಸ್ನ್ಯಾಪ್‍ಡೀಲ್ , ಇತರೆ ಗ್ರಾಹಕರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡು ನೀಡಿದ ಹಣವನ್ನು ಬಳಸಿಕೊಳ್ಳಲಿದೆ. ಕಂಪನಿಯ ಸಿಬ್ಬಂದಿತರುವ ಸ್ವೈಪಿಂಗ್ ಮಷೀನ್‍ನಲ್ಲಿ ತಮ್ಮ ಎಟಿಎಂ ಕಾರ್ಡನ್ನು ಸ್ವೈಪ್ ಮಾಡಬೇಕು. ಕಾರ್ಡಿನಿಂದ ಹಣ ಪಾವತಿಯಾದ ನಂತರ ಕೊರಿಯರ್ ವ್ಯಕ್ತಿ 2 ಸಾವಿರ ರೂ. ನಗದನ್ನು ಗ್ರಾಹಕರಿಗೆ ಹಸ್ತಾಂತರಿಸುತ್ತಾರೆ. ಸೇವೆಗೆ ಮನವಿ ಮಾಡಿದ ಒಂದು ದಿನದ ಬಳಿಕ ಹಣವನ್ನು ಡೆಲಿವರಿ ಮಾಡಲಾಗುವುದು. ಒಬ್ಬ ಗ್ರಾಹಕ ಒಮ್ಮೆ 2,000 ರೂಪಾಯಿಯನ್ನು ಮಾತ್ರ ಬುಕ್ ಮಾಡಬಹುದು. ಯಾವುದೇ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಬಹುದು. ಇದಕ್ಕಾಗಿ 1 ರೂಪಾಯಿ ಸೇವಾ ಶುಲ್ಕವನ್ನು ನೀಡಬೇಕು. ನಗದು ಬುಕಿಂಗ್ ಮಾಡುವ ವೇಳೆಯೇ ಡೆಬಿಟ್ ಕಾರ್ಡ್ ಅಥವಾ ಫ್ರೀಚಾರ್ಜ್ ಮುಖಾಂತರ ಸೇವಾ ಶುಲ್ಕವನ್ನು ಪಾವತಿಸಬೇಕು.
 
ಈಗಾಗಲೇ ಗುರ್ಗಾಂವ್ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಸೇವೆ ಪ್ರಾರಂಭವಾಗಿದ್ದು ಮುಂದಿನ ತಿಂಗಳಲ್ಲಿ ಇತರ ಪ್ರಮುಖ ನಗರಗಳಲ್ಲಿ ಸಹ ವಿಸ್ತರಿಸಲಾಗುವುದು. ಜನರ ಪ್ರತಿಕ್ರಿಯೆ ಮತ್ತು ಕರೆನ್ಸಿ ನೋಟುಗಳ ಲಭ್ಯತೆಯ ಆಧಾರದ ಮೇಲೆ ಹೆಚ್ಚಿನ ವಿವರಗಳನ್ನು ಅಪ್ಡೇಟ್ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ