ಪೆಟ್ರೋಲ್ ದರ ಲೀಟರ್‌ಗೆ 3.18 ರೂ. ಡೀಸೆಲ್ 3.09 ರೂ. ಏರಿಕೆ

ಶನಿವಾರ, 28 ಫೆಬ್ರವರಿ 2015 (19:15 IST)
ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ ದಿನವೇ ಪೆಟ್ರೋಲ್, ಡೀಸೆಲ್ ದರದಲ್ಲಿ ದಿಢೀರ್ ಏರಿಕೆಯಾಗಿದ್ದು, ಪೆಟ್ರೋಲ್ ದರದಲ್ಲಿ ಲೀಟರ್‌ಗೆ 3.18 ರೂ. ಹೆಚ್ಚಳವಾಗಿದ್ದರೆ ಡೀಸೆಲ್ ಲೀ.ಗೆ 3.09 ರೂ. ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ದಿಢೀರ್ ಏರಿಕೆಯಾಗಿದ್ದೇ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಾರಣವೆನ್ನಲಾಗಿದೆ. 

 ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದಲ್ಲಿ ಸತತ ಇಳಿಕೆಯಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಹಂತ, ಹಂತವಾಗಿ ಇಳಿಕೆಯಾಗಿ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಈಗ ಪೆಟ್ರೋಲ್, ಡೀಸೆಲ್ ಮತ್ತೆ ಏರಿದ್ದರಿಂದ ಸರಕು ಸಾಗಣೆ ದರವೂ ಹೆಚ್ಚಳವಾಗಲಿದ್ದು, ದಿನ ಬಳಕೆ ಪದಾರ್ಥಗಳ ದರ ದಿಢೀರ್ ಏರಿಕೆಯಾಗುವ ಸಂಭವವಿದೆ.

ಕೇಂದ್ರ ಬಜೆಟ್‌ನಲ್ಲಿ ಸೇವಾ ತೆರಿಗೆ ಏರಿಸಿರುವುದು ಸೇರಿದಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರಿಗೆ ಸಹಜವಾಗಿ ಜೋರಾದ ಬಿಸಿ ತಟ್ಟಬಹುದೆಂದು ಭಾವಿಸಲಾಗಿದೆ. 

ವೆಬ್ದುನಿಯಾವನ್ನು ಓದಿ