ರೈತರ ಮೇಲಲ್ಲದೇ ಮಧ್ಯಮವರ್ಗಕ್ಕೂ ತಟ್ಟಿದೆ ಬಿಸಿ : ರಾಹುಲ್ ವಾಗ್ದಾಳಿ

ಶನಿವಾರ, 2 ಮೇ 2015 (17:29 IST)
ಅನೇಕ ದಿನಗಳವರೆಗೆ ನಾಪತ್ತೆಯಾಗಿ ಪುನಃ ಮರಳಿದ ರಾಹುಲ್ ಗಾಂಧಿ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ಸರ್ಕಾರ ರೈತರನ್ನು ಕಡೆಗಣಿಸಿ ಕಾರ್ಪೊರೇಟ್ ಸ್ನೇಹಿಯಾಗಿದೆ ಎಂದು ವಾಗ್ದಾಳಿ ಮಾಡಿದ್ದರು. ಇಂದು ಸ್ಥಿರಾಸ್ತಿ ಮಸೂದೆಯ ಬಗ್ಗೆ ಸರ್ಕಾರದ ವಿರುದ್ಧ ಟೀಕಾಪ್ರವಾಹ ಹರಿಸಿದರು. ಈ ಮಸೂದೆ ರಿಯಲ್ ಎಸ್ಟೇಟ್ ಕಟ್ಟಡ ನಿರ್ಮಾಣಗಾರರಿಗೆ ಅನುಕೂಲ ಕಲ್ಪಿಸಿದೆ ಎಂದು ಟೀಕಿಸಿದರು. ಗೃಹನಿರ್ಮಾಣ ಯೋಜನೆಯನ್ನು ಸಕಾಲಿಕವಾಗಿ ನಿರ್ಮಿಸದೇ  ಬಿಲ್ಡರ್‌ಗಳು ನಂಬಿಕೆ ದ್ರೋಹ ಮಾಡಿದ್ದು, ಮಧ್ಯಮವರ್ಗದ ಗೃಹ ಖರೀದಿದಾರರು ಗಂಭೀರ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರ ಸಮಸ್ಯೆಗಳಿಗೆ ತಾವು ಸ್ಪಂದಿಸುವುದಾಗಿ ರಾಹುಲ್ ಭರವಸೆ ನೀಡಿದರು.
 
ಡೆಲ್ಲಿ ಎನ್‌ಸಿಆರ್ ಪ್ರದೇಶದಲ್ಲಿ ಗೃಹ ಖರೀದಿದಾರರ ನಿಯೋಗವನ್ನು ಭೇಟಿ ಮಾಡಿದ ಬಳಿಕ  ಮಾಧ್ಯಮದ ಜೊತೆ ಮಾತನಾಡಿದ ಅವರು ನಾನು 100-200ಜನರನ್ನು ಭೇಟಿ ಮಾಡಿದಾಗ ಬಿಜೆಪಿ ಸರ್ಕಾರ ರೈತರನ್ನು ಮತ್ತು ಆದಿವಾಸಿಗಳನ್ನು ದಮನ ಮಾಡುತ್ತಿದೆಯಲ್ಲದೇ ಮಧ್ಯಮವರ್ಗದ ಜನರು ಕೂಡ ದಮನಿತರಾಗಿದ್ದು ತಿಳಿದುಬಂತು ಎಂದು ಹೇಳಿದರು. 
 
ಬಿಜೆಪಿ ಸರ್ಕಾರದ ಹೊಸ ಸ್ಥಿರಾಸ್ತಿ ಮಸೂದೆಯನ್ನು ಟೀಕಿಸಿದ ಅವರು ಮುಂಚಿನ ಯುಪಿಎ ಸರ್ಕಾರದ ಮಸೂದೆಯನ್ನು ಪ್ರಸ್ತಾಪಿಸಿ,  ದಾಖಲೆಯಲ್ಲಿ ಪ್ರಸ್ತಾಪಿಸುವಷ್ಟೇ ಅಳತೆಯ ಜಾಗ ಖರೀದಿದಾರರಿಗೆ ಸಿಗುತ್ತದೆ ಎಂಬ ಸ್ಪಷ್ಟ ಪಾರದರ್ಶಕ ನಿಯಮವಿತ್ತು. ಆದರೆ ಪ್ರಸಕ್ತ ಮಸೂದೆಯಲ್ಲಿ ಆ ನಿಯಮಗಳನ್ನು ತೆಗೆಯಲಾಗಿದೆ. ಪ್ರಸಕ್ತ ಮಸೂದೆ ಖರೀದಿದಾರರ ಪರವಿಲ್ಲ. ಅದು ಬಿಲ್ಡರ್‌ಗಳ ಪರವಾಗಿದೆ ಎಂದು ಹೇಳಿದರು. 
 
 

ವೆಬ್ದುನಿಯಾವನ್ನು ಓದಿ