ದಿವಾಳಿ ಸ್ಥಿತಿಗೆ ಹತ್ತಿರವಾದ ರೈಲ್ವೆ : ಆದ್ರೂ ಪ್ರಯಾಣದರ ಏರಿಸೋಲ್ಲ

ಬುಧವಾರ, 25 ಫೆಬ್ರವರಿ 2015 (10:41 IST)
ನಾಳೆ ರೈಲ್ವೆ ಸಚಿವ ಸುರೇಶ್ ಪ್ರಭು ಮಂಡಿಸಲಿರುವ ರೈಲ್ವೆ ಬಜೆಟ್‌ನಲ್ಲಿ  ರೈಲುಪ್ರಯಾಣ ದರಗಳಲ್ಲಿ ಏರಿಕೆ ಮಾಡುವ ಸಾಧ್ಯತೆಯಿಲ್ಲ. ರೈಲ್ವೆ ಸಚಿವರು ಮುಖ್ಯ ಬಜೆಟ್‌ನಿಂದ ಅಧಿಕ ಬೆಂಬಲ, ಖಾಸಗಿ ಕ್ಷೇತ್ರದ ಜೊತೆ ಜಂಟಿ ಒಪ್ಪಂದ ಮತ್ತು ಉಳಿದ ದೇಶಗಳಿಂದ ಹಣಕಾಸಿನ ನೆರವು ಮೂಲಕ ಆರ್ಥಿಕವಾಗಿ ಹಳಿತಪ್ಪಿದ ಇಲಾಖೆಯನ್ನು ಪುನಃ ಹಳಿಯ ಮೇಲೆ ಕೂರಿಸಲು ನಿರ್ಧರಿಸಿದ್ದಾರೆ.

ಎಲ್ಲಾ ವರ್ಗಗಳ ಪ್ರಯಾಣ ದರ ಏರಿಕೆ ಸಾಧ್ಯತೆಯಿಲ್ಲ.ಪ್ರಯಾಣಿಕರ ಬೆಳವಣಿಗೆ ನಕಾರಾತ್ಮಕವಾಗಿದ್ದು, ನಿರೀಕ್ಷೆಯಂತೆ ಸರಕು ಸಾಗಣೆ ಕೂಡ ಬೆಳವಣಿಗೆಯಾಗಿಲ್ಲ ಎಂದು ಬಜೆಟ್ ತಯಾರಿಕೆಯಲ್ಲಿ ಒಳಗೊಂಡ ಅಧಿಕಾರಿಯೊಬ್ಬರು ತಿಳಿಸಿದರು.ಆದಾಗ್ಯೂ ತತ್ಕಾಲ್ ಮತ್ತು ಪ್ರೀಮಿಯಂ ವಿಶೇಷ ರೈಲುಗಳ ಪ್ರಯಾಣದರಗಳಲ್ಲಿ ಸ್ವಲ್ಪ ಹೊಂದಾಣಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದರು.

ಹೆಚ್ಚುಕಡಿಮೆ ದಿವಾಳಿ ಸ್ಥಿತಿಯಲ್ಲಿರುವ ರೈಲ್ವೆ ಇಲಾಖೆಯಲ್ಲಿ ಹೆಚ್ಚು ಅಗತ್ಯವಾದ ಸಂಪನ್ಮೂಲಗಳ ಸಂಗ್ರಹಕ್ಕೆ ಪ್ರಯಾಣ ದರ ಏರಿಕೆಯತ್ತ ವೈಯಕ್ತಿಕ ಒಲವನ್ನು ರೈಲ್ವೆ ಸಚಿವ ಪ್ರಭು ಹೊಂದಿದ್ದಾರೆ.ಆದರೆ ಕಳೆದ ವರ್ಷ ರೈಲ್ವೆ ಪ್ರಯಾಣ ದರ ತೀವ್ರವಾಗಿ ಏರಿಸಿದ್ದು, ಈಗ ಮತ್ತೆ ಬೆಲೆ ಏರಿಕೆ ಮಾಡಿದರೆ ಸಮರ್ಥಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ಅವರಿಗೆ ಮನದಟ್ಟು ಮಾಡಿದ್ದಾರೆಂದು ತಿಳಿದುಬಂದಿದೆ.

ಡೀಸೆಲ್ ದರಗಳು ಕಡಿಮೆಯಾಗಿರುವುದರಿಂದ ಪ್ರಯಾಣ ದರ ಏರಿಕೆಗೆ ಸರ್ಕಾರಕ್ಕೆ ಯಾವುದೇ ಆಧಾರವೂ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.ಡೀಸೆಲ್ ದರಗಳು ಕಡಿಮೆಯಾಗಿದ್ದರೂ ಅಧಿಕ ವಿದ್ಯುತ್ ದರಗಳಿಂದ ಇಂಧನ ಬಿಲ್ ಏರಿಕೆಯಾಗಿದ್ದು, ಅದಕ್ಕೆ ರಾಜಕೀಯ ವಿವರಣೆ ನೀಡುವುದು ರೈಲ್ವೆ ಸಚಿವರಿಗೆ ಕಷ್ಟವಾಗುತ್ತದೆ ಎಂದು ಅವರು ಹೇಳಿದರು.
 

ವೆಬ್ದುನಿಯಾವನ್ನು ಓದಿ