ರೈಲು ಪ್ರಯಾಣದರದಲ್ಲಿ ಇಳಿಮುಖವಿಲ್ಲ: ರೈಲ್ವೆ ಸಚಿವರ ಇಂಗಿತ

ಶುಕ್ರವಾರ, 30 ಜನವರಿ 2015 (16:00 IST)
ಡೀಸೆಲ್  ದರದಲ್ಲಿ ಕುಸಿತವಾಗಿದ್ದರೂ ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ  ರೈಲು ಪ್ರಯಾಣದರದಲ್ಲಿ ಯಾವುದೇ ಕಡಿತವಿಲ್ಲದಿರಬಹುದು ಎಂದು ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ಗುರುವಾರ ಸುಳಿವು ನೀಡಿದ್ದಾರೆ.

ಬೆಂಗಳೂರಿನಿಂದ ಹಿಂದು ಯಾತ್ರಾಕೇಂದ್ರ ಜಮ್ಮು ಕಾಶ್ಮೀರದ ವೈಷ್ಣೋದೇವಿಗೆ ಮೊದಲ ನೇರ ರೈಲನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಶವಂತಪುರ-ಕಾತ್ರಾ ವೀಕ್ಲಿ ಎಕ್ಸ್‌ಪ್ರೆಸ್ 3256 ಕಿಮೀಗಳನ್ನು 56 ಗಂಟೆಗಳು ಮತ್ತು 40 ನಿಮಿಷಗಳಲ್ಲಿ  ವೈಷ್ಣೋದೇವಿ ಮಂದಿರವಿರುವ ಹಿಮಾಲಯದ ತಪ್ಪಲನ್ನು ಮುಟ್ಟುತ್ತದೆ.
 
ವಾಸ್ತವವಾಗಿ ರೈಲ್ವೆ ಪ್ರಯಾಣದರದಲ್ಲಿ ಶೇ. 50ರಷ್ಟು ಮೊತ್ತವನ್ನು ಮಾತ್ರ ಪ್ರಯಾಣಿಕನಿಂದ ವಸೂಲಿ ಮಾಡುತ್ತದೆ. ಇದರಿಂದಾಗಿ ಸಬ್ಸಿಡಿಯ ಭಾರೀ ಅಂಶ ಈಗಾಗಲೇ ಇದೆ ಎಂದು ಸುರೇಶ್ ಪ್ರಭು ತಿಳಿಸಿದರು.
 
ಅಧಿಕ ವೇಗದ ರೈಲುಗಳನ್ನು ಕುರಿತ ಪ್ರಶ್ನೆಗೆ, ಅಧಿಕ ವೇಗದ ರೈಲುಗಳನ್ನು ವ್ಯಾಖ್ಯಾನಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ರೈಲ್ವೆ ಪ್ರಯಾಣಿಕ ರೈಲು ಮತ್ತು ಸರಕು ರೈಲುಗಳ ಸರಾಸರಿ ವೇಗವನ್ನು ಹೆಚ್ಚಿಸುವ ಕಡೆ ರೈಲ್ವೆ ಗಮನವಹಿಸಿದೆ ಎಂದು ಅವರು ಹೇಳಿದರು. 
 
ಅಧಿಕ ವೇಗದ ರೈಲುಗಳ ಬಗ್ಗೆ ತಪ್ಪುಕಲ್ಪನೆಯಿದೆ.ಇದಲ್ಲದೇ ಎಕ್ಸ್‌ಪ್ರೆಸ್ ರೈಲುಗಳು ಅನೇಕ ನಿಲ್ದಾಣಗಳಲ್ಲಿ ನಿಲ್ಲುತ್ತಿದ್ದು, ವೇಗ ಹೆಚ್ಚಿಸಲು ವಿಫಲವಾಗಿದೆ.ಸರ್ಕಾರಕ್ಕೆ ಹೊಸ ಕಾರ್ಯಕ್ರಮ ಮತ್ತು ಕಾರ್ಯತಂತ್ರವಿದ್ದು, ಮುಂದಿನ ರೈಲ್ವೆ ಬಜೆಟ್‌ನಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.
 
ಪ್ರಭು ಇನ್ನೂ ಮೂರು ರೈಲುಗಳಿಗೆ ಚಾಲನೆ ನೀಡಿದರು. ಪಾಟ್ನಾ-ಬೆಂಗಳೂರು, ಕಾಮಾಕ್ಯ-ಬೆಂಗಳೂರು, ಟಾಟಾನಗರ-ಯಶವಂತಪುರ ಎಕ್ಸ್‌ಪ್ರೆಸ್.

ವೆಬ್ದುನಿಯಾವನ್ನು ಓದಿ