ವಿಜಯ್ ಮಲ್ಯ ಬಂಧನಕ್ಕೆ, ಪಾಸ್‌ಪೋರ್ಟ್ ವಶಕ್ಕೆ ಕೋರಿದ ಎಸ್‌ಬಿಐ

ಗುರುವಾರ, 3 ಮಾರ್ಚ್ 2016 (16:44 IST)
ಸುಸ್ತಿದಾರರಾಗಿರುವ ಯುಪಿ ಗ್ರೂಪ್ ಪ್ರಮೋಟರ್ ವಿಜಯ್ ಮಲ್ಯ ಅವರನ್ನು ಬಂಧಿಸಬೇಕು ಮತ್ತು ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಎಸ್‌ಬಿಐ ಸಾಲ ವಸೂಲಾತಿ ಮಂಡಳಿಯನ್ನು ಕೋರಿದೆ. 
 
ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿದ 17 ಸಾಲ ಸಂಸ್ಥೆಗಳ ಒಕ್ಕೂಟದ ನೇತೃತ್ವ ವಹಿಸಿರುವ ಎಸ್‌ಬಿಐ ಮಲ್ಯಾ ಅವರಿಂದ 7000 ಕೋಟಿ ರೂ. ಸಾಲವನ್ನು ವಸೂಲಾತಿ ಮಾಡುವುದಕ್ಕಾಗಿ ಬೆಂಗಳೂರಿನಲ್ಲಿ  ಸಾಲ ವಸೂಲಾತಿ ಮಂಡಳಿಯನ್ನು ಇಂದು ಸಂಪರ್ಕಿಸಿದೆ. ಡಿಆರ್‌ಟಿಯಲ್ಲಿ ಈ ಕುರಿತು 4 ಅರ್ಜಿಗಳನ್ನು ಸಲ್ಲಿಸಿರುವ ಎಸ್‌ಬಿಐ, ಮಲ್ಯ ಪಾಸ್‌ಪೋರ್ಟ್ ಮುಟ್ಟುಗೋಲು, ಅವರ ಬಂಧನ ಮತ್ತು ಡಿಯಾಜಿಯೋ ಮಲ್ಯರಿಗೆ ನೀಡುವ ಹಣದ ಮೇಲೆ ಸಾಲದಾತ ಬ್ಯಾಂಕುಗಳ ಪ್ರಥಮ ಹಕ್ಕು ಮತ್ತು ದೇಶದಲ್ಲಿ ಮತ್ತು ವಿದೇಶದಲ್ಲಿ ಮಲ್ಯ ಆಸ್ತಿಪಾಸ್ತಿಯನ್ನು ಸಂಪೂರ್ಣ ಬಹಿರಂಗಮಾಡುವಂತೆ ಒತ್ತಾಯಿಸಿತು.

ಡಿಆರ್‌ಟಿಯನ್ನು ಸಂಪರ್ಕಿಸಿರುವ ಸಾಲದಾತ ಬ್ಯಾಂಕುಗಳ ತಕ್ಷಣದ ಉದ್ದೇಶವು  ಡಿಯಾಜಿಯೊ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ಚೇರ್‌ಮನ್ ಹುದ್ದೆಗೆ ರಾಜೀನಾಮೆ ನೀಡಿದ್ದಕ್ಕೆ ಮಲ್ಯರಿಗೆ ಸಿಗುವ 75 ದಶಲಕ್ಷ ಡಾಲರ್ ಪ್ಯಾಕೇಜ್ ಮೇಲೆ ಪ್ರಥಮ ಹಕ್ಕು ಪಡೆಯುವುದಾಗಿದೆ. ಮಲ್ಯ ಅವರನ್ನು ಬ್ಯಾಂಕ್ ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿರುವ ನಡುವೆ ಮಲ್ಯ ದೇಶವನ್ನು ತೊರೆದು ಲಂಡನ್‌ನಲ್ಲಿ ನೆಲೆಸುವ ಯೋಜನೆ ಹಾಕಿದ್ದಾರೆ. ಮಲ್ಯ ಮತ್ತು ಕಿಂಗ್ ಫಿಷರ್ ಏರ್‌ಲೈನ್ಸ್ ಸಂಸ್ಥೆ ಎಸ್‌ಬಿಐನ ನೇತೃತ್ವದ 17 ಸಾಲದಾತ ಬ್ಯಾಂಕುಗಳ ಒಕ್ಕೂಟಕ್ಕೆ 7800 ಕೋಟಿ ರೂ. ಸಾಲ ವಾಪಸು ಮಾಡಬೇಕಿದೆ.

ವೆಬ್ದುನಿಯಾವನ್ನು ಓದಿ