ವಿಜಯ್ ಮಲ್ಯಗೆ 7000 ಕೋಟಿ ಸಾಲ ನೀಡಿ, ಕೇವಲ 6 ಕೋಟಿ ವಸೂಲಿ ಮಾಡಿ ಕಂಗಾಲಾದ ಎಸ್‌ಬಿಐ

ಮಂಗಳವಾರ, 16 ಫೆಬ್ರವರಿ 2016 (18:19 IST)
ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಲ ಪಡೆದ ಕಾರ್ಪೋರೇಟ್ ಕಂಪೆನಿಗಳು ಯಾವ ರೀತಿ ವ್ಯವಸ್ಥೆಯನ್ನು ದುರುಪಯೋಗ ಮಾಡಿವೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ.
 
ಖ್ಯಾತ ಉದ್ಯಮಿ ವಿಜಯ್ ಮಲ್ಯ ಮಾಲೀಕತ್ವದ  ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಎಸ್‌ಬಿಐ ಸಮೂಹದ 17 ಬ್ಯಾಂಕ್‌ಗಳು 6900 ಕೋಟಿ ರೂಪಾಯಿಗಳ ಸಾಲವನ್ನು ನೀಡಿದ್ದವು. ಹಲವು ವರ್ಷಗಳಾದರೂ ಸಾಲ ಮರುಪಾವತಿಸದೇ ಮಲ್ಯ ಕೈ ಎತ್ತಿದ್ದಾರೆ. ಆದರೆ, ಇದರಿಂದ ಆಘಾತಗೊಂಡ ಬ್ಯಾಂಕ್‌ಗೆ ಕೇವಲ 6 ಕೋಟಿ ರೂಪಾಯಿಗಳಷ್ಟು ಮಾತ್ರ ಸಾಲವನ್ನು ವಸೂಲಿ ಮಾಡಲು ಸಾಧ್ಯವಾಗಿದೆ. 
 
ವರದಿಗಳ ಪ್ರಕಾರ, ಕಿಂಗ್‌‌ಫಿಶರ್ ಏರ್‌ಲೈನ್ಸ್‌ಗೆ ಸಾಲ ನೀಡಿದ ಪ್ರಮುಖ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನದಲ್ಲಿರುವ ಎಸ್‌ಬಿಐ, 1623 ಕೋಟಿ ರೂಪಾಯಿಗಳ ಹಿಂಬಾಕಿಯಲ್ಲಿ ಕೇವಲ 155 ಕೋಟಿ ರೂ ಸಾಲ ವಸೂಲಿ ಮಾಡಿದೆ. ಆದರೆ, ಬ್ಯಾಂಕ್‌ಗಳು ಇದೀಗ ಕಿಂಗ್‌ಫಿಶರ್ ಏರ್‌‌ಲೈನ್ಸ್ ಮೌಲ್ಯವನ್ನು 4 ಸಾವಿರ ಕೋಟಿ ರೂಪಾಯಿಗಳಿಂದ ಕೇವಲ 6 ಕೋಟಿ ರೂಪಾಯಿಗಳಿಗೆ ಇಳಿಸಿದೆ.
 
ಕಿಂಗ್‌ಫಿಶರ್ ಸಂಸ್ಥೆಯನ್ನು ಖರೀದಿಸಲು ಯಾರು ಮುಂದೆ ಬಾರದಿರುವ ಹಿನ್ನೆಲೆಯಲ್ಲಿ ಎಸ್‌ಬಿಐ ಇಕ್ಕಟ್ಟಿಗೆ ಸಿಲುಕಿದೆ. 6963 ಕೋಟಿ ರೂಪಾಯಿಗಳ ಸಾಲ ವಸೂಲಾತಿಗಾಗಿ ಮಲ್ಯ ಮಾಲೀಕತ್ವದ ಮುಂಬೈನಲ್ಲಿರುವ ಕಿಂಗ್‌ಫಿಶರ್ ಹೌಸ್‌ನ್ನು ಮಾರ್ಚ್ 17 ಕ್ಕೆ ಹರಾಜು ಹಾಕಲು ನಿರ್ಧರಿಸಿದೆ.  
 
ಎಸ್‌ಬಿಐ ಬ್ಯಾಂಕ್‌ ಮಲ್ಯ ಅವರಿಗೆ 1600 ಕೋಟಿ ರೂಪಾಯಿಗಳ ಸಾಲವನ್ನು ನೀಡಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ 800 ಕೋಟಿ ರೂಪಾಯಿಗಳ ಸಾಲವನ್ನು ನೀಡಿದೆ. ಹಲವಾರು ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ಪಡೆದ ವಿಜಯ್ ಮಲ್ಯ, ಮರುಪಾವತಿ ಮಾಡಲು ಹಣವಿಲ್ಲ. ಮತ್ತಷ್ಟು ಸಾಲ ಕೊಡಿ ಉದ್ಯಮದಲ್ಲಿ ಲಾಭಗಳಿಸಿ ಮರುಪಾವತಿ ಮಾಡುವುದಾಗಿ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ.
 
ವಿಜಯ್ ಮಲ್ಯ ನಿರ್ಧಾರಕ್ಕೆ ಕಂಗಾಲಾಗಿರುವ ಬ್ಯಾಂಕ್‌ಗಳು ಅವರು ಅಡವಿಟ್ಟಿದ್ದ ಬಂಗಲೆ, ಹೋಟೆಲ್, ರಿಸಾರ್ಟ್‌ಗಳನ್ನು ಹರಾಜು ಹಾಕಲು ನಿರ್ಧರಿಸಿವೆ. ಆದರೆ, ಎಲ್ಲವನ್ನೂ ಮಾರಾಟ ಮಾಡಿದರೂ ನೀಡಿದ ಸಾಲದ ಶೇ.10 ರಷ್ಟು ಹಣ ಕೂಡಾ ವಾಪಸ್ ಬಾರದಿರುವುದು ಚಿಂತೆಗೆ ಕಾರಣವಾಗಿದೆ.  

ವೆಬ್ದುನಿಯಾವನ್ನು ಓದಿ