ಜಿಎಸ್‌ಟಿಗೆ ಸಂವಿಧಾನಿಕ ತಿದ್ದುಪಡಿ ಮಸೂದೆಗೆ ತಮಿಳುನಾಡು ತಿರಸ್ಕಾರ

ಶುಕ್ರವಾರ, 19 ಡಿಸೆಂಬರ್ 2014 (15:31 IST)
ಎಸ್‌ಟಿಗೆ( ಸರಕು ಮತ್ತು ಸೇವಾ ತೆರಿಗೆ) ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಚಯಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ತಮಿಳುನಾಡು ಸರ್ಕಾರ ತಿರಸ್ಕರಿಸಿದೆ.

ಜಿಎಸ್‌ಟಿ ಸಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರುವ ಮುಂಚೆ ರಾಜ್ಯ ಹಣಕಾಸು ಸಚಿವರ  ಉನ್ನತಾಧಿಕಾರ ಸಮಿತಿಗೆ ಜಟಿಲ ವಿಷಯಗಳ ಬಗ್ಗೆ ಒಮ್ಮತ ಮೂಡುವಂತೆ ಪ್ರಯತ್ನಿಸಲು ಕೇಂದ್ರ ಅನುಮತಿ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಆತುರದಲ್ಲಿ ಮಸೂದೆಯನ್ನು ಜಾರಿಗೆ ತರುವುದಕ್ಕೆ ಆಕ್ಷೇಪಿಸಿದ ಅವರು, ಇಂತಹ ಕ್ರಮದಿಂದ, ವಿತ್ತೀಯ ಸ್ವಾಯತ್ತತೆ ಮತ್ತು ರಾಜ್ಯಗಳ ಆದಾಯ ಸ್ಥಿತಿಗೆ ಗಂಭೀರ ದೀರ್ಘಾವಧಿ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. ಇಂತಹ ಸುಧಾರಣೆ ಪ್ರಯತ್ನಿಸುವುದಕ್ಕೆ ಮುಂಚೆ ನಿಜವಾದ ಒಮ್ಮತ ಸಾಧಿಸುವಂತೆ ಮತ್ತು ರಾಜ್ಯಗಳ ಭಯ ನಿವಾರಿಸುವುದನ್ನು ಕೇಂದ್ರ ಸರ್ಕಾರ ಖಾತರಿಪಡಿಸಬೇಕು ಎಂದು ನುಡಿದಿದ್ದಾರೆ.

ಪನ್ನೀರ್ ಸೆಲ್ವಂ ವಿರೋಧದ ನಡುವೆ ಪಶ್ಚಿಮ ಬಂಗಾಳದ ಆಕ್ಷೇಪವೂ ಕೂಡ ಹೊರಬಿದ್ದಿದೆ.  ಜಿಎಸ್‌ಟಿಯಿಂದ ಆದಾಯ ನಷ್ಟಕ್ಕೆ ಕಾರಣವಾಗುತ್ತದೆಂದು ಹೇಳಿ ರಾಜ್ಯಗಳು ಸುದೀರ್ಘ ಕಾಲದಿಂದ ಈ ವಿಷಯದ ಬಗ್ಗೆ ನಿರಾಸಕ್ತಿ ಹೊಂದಿದ್ದವು. ಈ ವಾರದ ಆರಂಭದಲ್ಲಿ ಕೇಂದ್ರ ಸರ್ಕಾರ, ಪೆಟ್ರೋಲಿಯಂ ಉತ್ಪನ್ನಗಳನ್ನು ಮಸೂದೆಯಿಂದ ಕೆಲವು ವರ್ಷಗಳ ಕಾಲ ಹೊರಗಿರಿಸಿ, ರಾಜ್ಯಗಳ ಆದಾಯ ನಷ್ಟಕ್ಕೆ ಪರಿಹಾರ ನೀಡುವುದಾಗಿ ಪ್ರಸ್ತಾಪ ಮಂಡನೆ ಮಾಡಿತ್ತು. 

ವೆಬ್ದುನಿಯಾವನ್ನು ಓದಿ