ಐಬಿಎಂ ಲಾಭ ಕುಸಿದಿದ್ದರೂ $ಸಿಇಒಗೆ 3.6 ದಶಲಕ್ಷ ಬೋನಸ್

ಶನಿವಾರ, 31 ಜನವರಿ 2015 (14:42 IST)
ಐಬಿಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರ್ಜಿನಿಯಾ ರೊಮೆಟ್ಟಿ ಕಳೆದ ವರ್ಷದ ಕಾರ್ಯನಿರ್ವಹಣೆಗಾಗಿ 3.6 ದಶಲಕ್ಷ ಡಾಲರ್ ಬೋನಸ್ ರೂಪದಲ್ಲಿ ಪಡೆಯಲಿದ್ದಾರೆ. 2014ರಲ್ಲಿ ಕಂಪನಿಯ ಮಾರಾಟ ಮತ್ತು ಲಾಭ ಕುಸಿದಿದ್ದರೂ ರೊಮೆಟ್ಟಿಗೆ ಈ ಬೋನಸ್ ನೀಡಲಾಗುತ್ತಿದೆ.

2013ರಲ್ಲಿ ರೊಮೆಟ್ಟಿ ಮತ್ತಿತರ ಎಕ್ಸಿಕ್ಯೂಟಿವ್‌ಗಳು ಬೋನಸ್ ಪಡೆದಿರಲಿಲ್ಲ. ಆ ವರ್ಷ ಐಬಿಎಂ ನಿರಾಶಾದಾಯಕ ಫಲಿತಾಂಶ ನೀಡಿದ್ದರಿಂದಾಗಿ ಅವರು ಬೋನಸ್ ಪಡೆದಿರಲಿಲ್ಲ. ಆದರೆ ಐಬಿಎಂ ಇನ್ನೂ ಲಾಭ ಗಳಿಸದೇ ಹೆಣಗಾಡುತ್ತಿದ್ದರೂ, ರೊಮೆಟ್ಟಿ ಪ್ರಯತ್ನಗಳಿಗೆ ವಿಶ್ವಾಸ ತೋರಿಸಲು ಹೊಸ ಪ್ಯಾಕೇಜ್ ಘೋಷಿಸಿದೆ.

ಸಿಇಒ ಆಗಿ ರೊಮೆಟ್ಟಿ ಅವರು ಮೂಲ ವೇತನದಲ್ಲಿ 6.7 ಶೇಕಡ ಹೆಚ್ಚಳವನ್ನು ಪಡೆಯಲಿದ್ದಾರೆ. 2012ರಲ್ಲಿ ಅವರು ಹುದ್ದೆ ಅಲಂಕರಿಸಿದಾಗಿನಿಂದ ಅದು 1.5 ದಶಲಕ್ಷ ಡಾಲರ್‌ಗಳಾಗಿದೆ. 2015ರಲ್ಲಿ ಅವರು 1.6 ದಶಲಕ್ಷ ಡಾಲರ್ ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಐಬಿಎಂನಿಂದ ಸುಮಾರು ಒಂದು ಲಕ್ಷ ನೌಕರರಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತದೆ ಎಂಬ ಸುದ್ದಿಯ ನಡುವೆ ಸಿಇಒಗೆ ಬೋನಸ್ ಘೋಷಿಸಿರುವುದು ಅಲ್ಲಿನ ನೌಕರರು ಹುಬ್ಬೇರಿಸುವಂತೆ ಮಾಡಿದೆ.

ವೆಬ್ದುನಿಯಾವನ್ನು ಓದಿ