ಫೋರ್ಡ್ ಪ್ರತಿಷ್ಠಾನ, ಗ್ರೀನ್‌ಪೀಸ್ ಮೇಲೆ ಭಾರತ ದಾಳಿ: ಸ್ಪಷ್ಟೀಕರಣ ಕೇಳಿದ ಅಮೆರಿಕ

ಶನಿವಾರ, 25 ಏಪ್ರಿಲ್ 2015 (11:22 IST)
ಫೋರ್ಡ್ ಪ್ರತಿಷ್ಠಾನ ಮತ್ತು ಗ್ರೀನ್ ‌ಪೀಸ್ ಮೇಲೆ ಭಾರತ ದಾಳಿ ಮಾಡುತ್ತಿರುವ ಘಟನೆ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದ್ದು, ಈ ಕ್ರಮದ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದೆ. ಭಾರತ ಗೃಹ ವ್ಯವಹಾರಗಳ ಸಚಿವಾಲಯವು ಗ್ರೀನ್ ಪೀಸ್ ಇಂಡಿಯಾದ ನೋಂದಣಿ ಅಮಾನತುಮಾಡಿದ್ದು, ಫೋರ್ಡ್ ಪ್ರತಿಷ್ಠಾನವನ್ನು ಪೂರ್ವಾನುಮತಿ ನಿಗಾ ಪಟ್ಟಿಯಲ್ಲಿ ಇರಿಸಿದೆ ಎಂದು ವಿದೇಶಾಂಗ ಇಲಾಖೆ ಉಪ ಉಸ್ತುವಾರಿ ವಕ್ತಾರೆ ಮೇರಿ ಹರ್ಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
 
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಅನ್ವಯವಾಗುವ ನಾಗರಿಕ ಸಮಾಜದ ಸಂಸ್ಥೆಗಳಿಗೆ ಉಂಟಾಗುವ ತೊಂದರೆಗಳ ಬಗ್ಗೆ ನಾವು ಕಳವಳಗೊಂಡಿರುವುದಾಗಿ ಅವರು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 
 
ಎನ್‌ಜಿಒಗಳಿಗೆ ವಿದೇಶಿ ಆರ್ಥಿಕ ನೆರವಿನ ಕುರಿತು ದಾಳಿ ಮಾಡಿರುವ ಕೇಂದ್ರ ಗೃಹಸಚಿವಾಲಯ ಅಮೆರಿಕದ ಫೋರ್ಡ್ ಪ್ರತಿಷ್ಠಾನವನ್ನು ನಿಗಾಪಟ್ಟಿಯಲ್ಲಿ ಇರಿಸಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಬರುವ ಎಲ್ಲಾ ನಿಧಿಗಳಿಗೆ ರಾಷ್ಟ್ರೀಯ ಭದ್ರತಾ ಕಾಳಜಿ ಕಾರಣದಿಂದ ತನ್ನ ಅನುಮತಿ ಪಡೆಯಬೇಕು ಎಂದು ತಿಳಿಸಿದೆ.
ಫೋರ್ಡ್ ಪ್ರತಿಷ್ಠಾನ ನೀಡುವ ಎಲ್ಲಾ ಆರ್ಥಿಕ ನೆರವಿನ ಮೇಲೆ ನಿಗಾವಹಿಸಲು ಗೃಹಸಚಿವಾಲಯ ನಿರ್ಧರಿಸಿದ್ದು, ಫೋರ್ಡ್ ಪ್ರತಿಷ್ಠಾನದಿಂದ ಬರುವ ಫಂಡ್‌ಗಳ ಬಗ್ಗೆ ಗೃಹಸಚಿವಾಲಯದ ಗಮನಕ್ಕೆ ತರುವಂತೆ ರಿಸರ್ವ್ ಬ್ಯಾಂಕ್‌ಗೆ ತಿಳಿಸಿದೆ. 
 
ಅಮೆರಿಕ ಮೂಲಕ ಫೋರ್ಡ್ ಪ್ರತಿಷ್ಠಾನವು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದು, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ನಡೆಸುವ ಎನ್‌ಜಿಒ ಮೂಲಕ ಕೋಮು ದ್ವೇಷಕ್ಕೆ ಉತ್ತೇಜನ ನೀಡುತ್ತಿರುವುದರಿಂದ ಫೋರ್ಡ್ ಪ್ರತಿಷ್ಠಾನದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗುಜರಾತ್ ಸರ್ಕಾರವು ಗೃಹಸಚಿವಾಲಯಕ್ಕೆ ಕೋರಿದ ಬಳಿಕ ಈ ಬೆಳವಣಿಗೆ ಉಂಟಾಗಿದೆ.  

ವೆಬ್ದುನಿಯಾವನ್ನು ಓದಿ