ಕೊಳ್ಳುವಾಗಲೇ ಕಣ್ಣೀರು ತರಿಸುತ್ತಿದೆ ಈರುಳ್ಳಿ

ಭಾನುವಾರ, 2 ಆಗಸ್ಟ್ 2015 (15:35 IST)
ಕಳೆದ ಕೆಲವು ದಿನಗಳಿಂದ ಈರುಳ್ಳಿ ದರ ಗಗನಕ್ಕೇರುತ್ತಿದೆ. ಹತ್ತು ದಿನದ ಹಿಂದೆ 20-25 ರೂಪಾಯಿ ಇದ್ದ ಈರುಳ್ಳಿ ಬೆಲೆ ಈಗ 50 ರಿಂದ 60ರೂಪಾಯಿಗೆ ಏರಿಕೆಯಾಗಿದೆ. 

ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆ ಕೊರತೆ ಹಾಗೂ ರಾಜ್ಯದಲ್ಲಿ ಮಳೆಯಾಗದೆ ಬೆಳೆ ಬರದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಹದಿನೈದು ದಿನದ ಹಿಂದೆ 1 ಕೆ.ಜಿ ಗೆ 20 ರಿಂದ 30 ರೂ. ಇದ್ದ ಈರುಳ್ಳಿ ಬೆಲೆ ಈಗ 50 ರಿಂದ 60 ರೂ. ಆಸುಪಾಸಿನಲ್ಲಿದೆ. ಫೆಬ್ರುವರಿಯಲ್ಲಿ ಮಹಾರಾಷ್ಟ್ರದಲ್ಲಿ ಬಿದ್ದ ಆಲಿಕಲ್ಲು  ಮಳೆಯಿಂದಾಗಿ ಈರುಳ್ಳಿ ಬೆಳೆ ಸಾಕಷ್ಟು ಹಾಳಾಗಿತ್ತು. ದೇಶದಲ್ಲೇ ಮಹಾರಾಷ್ಟ್ರದಲ್ಲಿ ಹೆಚ್ಚು ಈರುಳ್ಳಿ ಬೆಳೆಯುತ್ತಾರೆ. ಬೇರೆ ಬೇರೆ ರಾಜ್ಯಗಳಿಗೆ ಅಲ್ಲಿಂದ ರಫ್ತಾಗುತ್ತದೆ. ಹೀಗಾಗಿ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
 
ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಕೂಡ ಅತಿ ವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದೆ. 
 
ನಮ್ಮ ರಾಜ್ಯದ ಈರುಳ್ಳಿ ಸೆಪ್ಟೆಂಬರ್‍ ತಿಂಗಳಲ್ಲಿ ಮಾರ್ಕೆಟ್‌ಗೆ ಬರುವ ಸಾಧ್ಯತೆ ಇದೆ. ಆದರೆ ಮಳೆಯ ಕೊರತೆಯಿಂದಾಗಿ ರಾಜ್ಯದ ಇಳುವರಿ ಕೂಡ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
 
ಈರುಳ್ಳಿ ಬೆಲೆ ಏರಿಕೆ ಹೊಟೆಲ್ ಉದ್ಯಮವನ್ನು ನಡೆಸುವವರಿಗೆ ಭಾರೀ ಆತಂಕವನ್ನು ತರಿಸಿದ್ದು, ತಯಾರಿಸುವ ಪದಾರ್ಥದಲ್ಲಿ ಈರುಳ್ಳಿ ಬಳಕೆಗೆ ಕತ್ತರಿ ಹಾಕುವುದರ ಕುರಿತು ಹೊಟೆಲ್ ಮಾಲೀಕರು ಚಿಂತನೆ ನಡೆಸಿದ್ದಾರೆ. ಬಹುಮುಖ್ಯವಾಗಿ ಹೊಟೆಲ್‌ಗಳಲ್ಲಿ ಈರುಳ್ಳಿ ದೋಸೆ ಮತ್ತು ಆನಿಯನ್ ಪಕೋಡಾವನ್ನು ತಯಾರಿಸುವುದನ್ನೇ ನಿಲ್ಲಿಸತೊಡಗಿದ್ದಾರೆ. 
 
"ಈರುಳ್ಳಿ ಬೆಳೆ ವಿಪರೀತ ಹೆಚ್ಚಿರುವುದರಿಂದ ನಮಗೆ ಈರುಳ್ಳಿಯಿಂದ ತಯಾರಿಸಲಾಗುವ  ಪರಾರ್ಥಗಳು ನಷ್ಟವನ್ನು ಉಂಟು ಮಾಡುತ್ತಿವೆ. ಹೀಗಾಗಿ ಈರುಳ್ಳಿ ಬಳಕೆಗೆ ಮಿತಿ ಹೇರುತ್ತಿದ್ದೇವೆ", ಎನ್ನುತ್ತಿದ್ದಾರೆ ಹೊಟೆಲ್ ಮಾಲೀಕರು. 

ವೆಬ್ದುನಿಯಾವನ್ನು ಓದಿ