ಅನೈತಿಕ ಸೆಕ್ಸ್‌ನಲ್ಲಿ ಪಾಲ್ಗೊಂಡ ಮಹಿಳೆಯರನ್ನು ಗಲ್ಲಿಗೇರಿಸಿ: ಅಬು ಆಜ್ಮಿ

ಶುಕ್ರವಾರ, 11 ಏಪ್ರಿಲ್ 2014 (16:48 IST)
ಪುರುಷ ಪ್ರಧಾನ, ಮೌಢ್ಯ ಮನಸ್ಕ ವಿಚಾರ ಲಹರಿಯ ಅತಿ ಕೀಳುಮಟ್ಟದ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ, ವಿವಾಹೇತರ ಅಥವಾ ಅನೈತಿಕ ಸಂಬಂಧದ ಸೆಕ್ಸ್‌ನಲ್ಲಿ ಪಾಲ್ಗೊಂಡ ಮಹಿಳೆಯರನ್ನು ಮತ್ತು ಅತ್ಯಾಚಾರಕ್ಕೆ ಒಳಗಾದವರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.
PTI

ಮಿಡ್ ಡೇಯಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ಅಜ್ಮಿ "ಅತ್ಯಾಚಾರಕ್ಕೆ ಇಸ್ಲಾಂ ಧರ್ಮ ನೇಣು ಶಿಕ್ಷೆಯನ್ನು ನೀಡುತ್ತದೆ. ಆದರೆ ಇಲ್ಲಿ ಮಹಿಳೆಯರು ಅಪರಾಧಿಯಾಗಿದ್ದರೂ ಕೂಡ ಅವರಿಗೆ ಯಾವ ಶಿಕ್ಷೆಯನ್ನೂ ನೀಡಲಾಗುವುದಿಲ್ಲ. ಅದು ಕೇವಲ ಪುರುಷರಿಗೆ ಮಾತ್ರ" ಎಂದು ಆರೋಪಿಸಿದ್ದಾರೆ.

"ಭಾರತದಲ್ಲಿ ವ್ಯಕ್ತಿಯ ಒಪ್ಪಿಗೆಯೊಂದಿಗೆ ಲೈಂಗಿಕತೆಯಲ್ಲಿ ತೊಡಗಿದರೆ ಅದು ಸರಿ. ಆದರೆ, ಅದೇ ವ್ಯಕ್ತಿ ದೂರನ್ನು ನೀಡಿದರೆ ಅದು ಸಮಸ್ಯೆ ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಾವು ಅಂತಹ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದೇವೆ".

"ಯಾರಾದರೂ ತಮ್ಮನ್ನು ಸ್ಪರ್ಶಿಸಿದರೆ ಹುಡುಗಿಯರು ದೂರು ನೀಡುತ್ತಾರೆ. ಸ್ಪರ್ಶಿಸದಿದ್ದರೂ ಕೂಡ ಆಪಾದನೆ ಮಾಡುತ್ತಾರೆ. ನಂತರ ಅದು ಸಮಸ್ಯೆಯಾಗುತ್ತದೆ ಮತ್ತು ಪುರುಷನ ಗೌರವ ನಾಶವಾಗುತ್ತದೆ. ಸಮ್ಮತಿಯಿದ್ದು ಅಥವಾ ಸಮ್ಮತಿ ಇಲ್ಲದೆ ಅತ್ಯಾಚಾರ ನಡೆದರೆ ಅದು ಶಿಕ್ಷಾರ್ಹ ಎಂದು ಇಸ್ಲಾಂ ಧರ್ಮ ಶಿಫಾರಸು ಮಾಡುತ್ತದೆ" ಎಂದು ಅಜ್ಮಿ ಅಭಿಪ್ರಾಯ ಪಟ್ಟಿದ್ದಾರೆ.

ಹಾಗಾದರೆ ಅತ್ಯಾಚಾರಕ್ಕೆ ಒಳಗಾದವರಿಗೆ ಪರಿಹಾರವೇನು ಎಂದು ಕೇಳಿದಾಗ ಉತ್ತರಿಸಿದ ಅಜ್ಮಿ "ಯಾವುದೇ ಮಹಿಳೆ, ವಿವಾಹಿತೆ ಅಥವಾ ಅವಿವಾಹಿತೆ, ತನ್ನ ಅನುಮತಿಯಿಂದ ಅಥವಾ ಅನುಮತಿ ಇಲ್ಲದೆ,ಪುರುಷನ ಜತೆ ಹೋದರೆ ಅವಳನ್ನು ಗಲ್ಲಿಗೇರಿಸಬೇಕು. ಇಬ್ಬರಿಗೂ ನೇಣು ಹಾಕಬೇಕು " ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ