ಚಿಕ್ಕಬಳ್ಳಾಪುರ: ಅಲ್ಲು ಅರ್ಜುನ್ ಅಭಿಮಾನಿಯೊಬ್ಬ ಪುಷ್ಪ-2 ಸಿನಿಮಾ ನೋಡಲು ಆತುರವಾಗಿ ಹೋಗುತ್ತಿದ್ದಾಗ, ರೈಲಿನಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಮೃತನನ್ನು ಶ್ರೀಕಾಕುಳಂ ಮೂಲದ ಪ್ರವೀಣ್ ಎಂದು ಗುರುತಿಸಲಾಗಿದೆ. ರೈಲು ಹಳಿ ಕ್ರಾಸಿಂಗ್ ಮಾಡುವ ವೇಳೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಅಂತ ತಿಳಿದುಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲೇ ಸ್ನೇಹಿತರೊಂದಿಗೆ ನೆಲೆಸಿದ್ದ. ಇಂದು ಸ್ನೇಹಿತರ ಜೊತೆ ಸೇರಿ ದೊಡ್ಡಬಳ್ಳಾಪುರ ನಗರದ ಚಿತ್ರಮಂದಿರಕ್ಕೆ ತೆರಳುವ ವೇಳೆ ಬಾಶೆಟ್ಟಿಹಳ್ಳಿ ಬಳಿ ರೈಲ್ವೆ ಹಳಿಗಳನ್ನ ದಾಟುವ ಸಮಯದಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಆಗಮಿಸಿದ್ದು, ಇದನ್ನರಿಯದ ಪ್ರವೀಣ್ ಎರಡು ರೈಲುಗಳ ಮಧ್ಯೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸ್ನೇಹಿತರ ಕಣ್ಣು ಎದುರೇ ಘಟನೆ ನಡೆದಿದ್ದು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಹೊರ ಠಾಣಾ ಪೊಲೀಸರು ಭೇಟಿ ಮಾಡಿ ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.