ಡಾ.ರಾಜ್ ಕುಮಾರ್ ರವರು ಅಭಿನಯಿಸಿದ್ದ ‘ತ್ರಿಮೂರ್ತಿ’ ಸಿನಿಮಾದ ನಿರ್ದೇಶಕ ಸಿ.ವಿ.ರಾಜೇಂದ್ರನ್ ಇನ್ನಿಲ್ಲ !
ಸೋಮವಾರ, 2 ಏಪ್ರಿಲ್ 2018 (06:44 IST)
ಚೆನ್ನೈ : ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ್ದ ‘ತ್ರಿಮೂರ್ತಿ’ ಸಿನಿಮಾವನ್ನು ನಿರ್ದೇಶಿಸಿದ ತಮಿಳು ಖ್ಯಾತ ನಿರ್ದೇಶಕ ಸಿ.ವಿ.ರಾಜೇಂದ್ರನ್ ಅವರು ಭಾನುವಾರದಂದು ಕೊನೆಯುಸಿರೆಳೆದಿದ್ದಾರೆ.
81 ನೇ ವಯಸ್ಸಿನ ನಿರ್ದೇಶಕ ಸಿ.ವಿ.ರಾಜೇಂದ್ರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಭಾನುವಾರದಂದು ನಿಧನರಾಗಿದ್ದಾರೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ. ಇವರು ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ್ದ ‘ತ್ರಿಮೂರ್ತಿ’ ಚಿತ್ರ. ಇದಲ್ಲದೇ ಡಾ.ವಿಷ್ಣುವರ್ಧನ್, ರಜಿನಿಕಾಂತ್ ಮುಖ್ಯಭೂಮಿಯ ಗಲಾಟೆ ಸಂಸಾರ, ದ್ವಾರ್‌ಕೀಶ್ ನಿರ್ಮಾಣದ ಕಿಟ್ಟು-ಪುಟ್ಟು, ವಿದೇಶದಲ್ಲಿ ಚಿತ್ರೀಕರಿಸಿದ ಸಿಂಗಪೂರ್‌ನಲ್ಲಿ ರಾಜಾಕುಳ್ಳ, ಪ್ರೇಮ ಮತ್ಸರ(ವಿ.ರವಿಚಂದ್ರನ್ ನಿರ್ಮಾಣದ ಮೊದಲ ಚಿತ್ರ), ಪ್ರೀತಿ ಮಾಡು ತಮಾಷೆ ನೋಡು , ಅದಲು ಬದಲು , ಅಳಿಯ ದೇವರು , ಕಮಲಾ, ಉಷಾ ಸ್ವಯಂವರ, ಘರ್ಜನೆ , ನಾನೇ ರಾಜಾ , ಪೂರ್ಣ ಚಂದ್ರ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದವು. ಹಾಗೇ ಇವರು ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಅನೇಕ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ.
ರಾಜೇಂದ್ರನ್ ಅವರು ಪತ್ನಿ ಜಾನಕಿ ರಾಜೇಂದ್ರನ್, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಪುತ್ರ ಅಮೇರಿಕದಿಂದ ಬಂದ ನಂತರ ಅಂತಿಮ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ