ಬೆಂಗಳೂರು: ನಿನ್ನೆ ಹುಟ್ಟುಹಬ್ಬ ನಿಮಿತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನೇಕರು ದಿನಸಿ ಸಾಮಾಗ್ರಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ಅವರು ಬಡವರು, ಅನಾಥಾಶ್ರಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
ಸಂಜೆ ಸ್ವತಃ ದರ್ಶನ್ ಆಹಾರ ಸಾಮಗ್ರಿಗಳನ್ನು ಬಡವರಿಗೆ ಹಂಚುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಸರ್ಕಾರೀ ಶಾಲೆಯ ಮಕ್ಕಳಿಗೆ ಪರೀಕ್ಷಾ ಸಾಮಗ್ರಿಗಳನ್ನು ವಿತರಿಸಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಿದ್ದಾರೆ.
ಮೊನ್ನೆ ಮಧ‍್ಯರಾತ್ರಿಯಿಂದಲೂ ಅಭಿಮಾನಿಗಳನ್ನು ಭೇಟಿ ಮಾಡಿದ ದರ್ಶನ್ ನಿನ್ನೆಯೂ ಅದನ್ನು ಮುಂದುವರಿಸಿದ್ದರು. ಮನೆಯ ಮುಂದೆ ಹಾಕಲಾಗಿದ್ದ ವಿಶೇಷ ಪೆಂಡಾಲ್ ನಲ್ಲಿ ಸರತಿ ಸಾಲಿನಲ್ಲಿ ಬರುವ ಅಭಿಮಾನಿಗಳ ಕೈಕುಲುಕಿ ಶುಭಾಶಯ ಸ್ವೀಕರಿಸಿದರು. ಬಳಿಕ ಬಂದ ಎಲ್ಲಾ ಅಭಿಮಾನಿಗಳಿಗೆ ಊಟ ಹಾಕಿ ಕಳುಹಿಸಿದ್ದಾರೆ.
ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ ತರುವುದು ಬೇಡ. ಅದರ ಬದಲು ಬಡವರಿಗೆ ದಾನ ಮಾಡಲು ನಿಮ್ಮ ಕೈಲಾದ ದಿನಸಿ ವಸ್ತುಗಳನ್ನು ನೀಡಿ ಎಂದು ದರ್ಶನ್ ಮನವಿ ಮಾಡಿದ್ದರು. ಅದರಂತೆ ಹಲವರು ಅಕ್ಕಿ, ಬೇಳೆ, ಗೋಧಿ ಹಿಟ್ಟು ಎಂದು ತಮಗೆ ತೋಚಿದ ವಸ್ತುಗಳನ್ನು ತಂದುಕೊಟ್ಟಿದ್ದರು.
ಇವೆಲ್ಲವನ್ನೂ ದರ್ಶನ್ ತಮ್ಮ ಸಂಗಡಿಗರ ಜೊತೆಗೂಡಿ ಅರ್ಹರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಅನಗತ್ಯ ಖರ್ಚು ಮಾಡುವ ಬದಲು ಅಭಿಮಾನಿಗಳು ಈ ರೀತಿ ಅಭಿಮಾನ ತೋರಿಸಿ ಮಾದರಿಯಾಗಿರುವುದು ಅಭಿನಂದನಾರ್ಹವಾಗಿದೆ.