ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್ ಸಿನಿಮಾದ ಟೈಟಲ್ ಕೇಳಿದರೆ ನಗು ಬಂದೀತು
ಗುರುವಾರ, 1 ಡಿಸೆಂಬರ್ 2016 (06:58 IST)
ಬೆಂಗಳೂರು: ಮುಂಗಾರು ಮಳೆ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಒಂದು ಹೊಸ ಸಿನಿಮಾ ಮೂಡಿ ಬರಲಿದೆ ಎನ್ನುವುದನ್ನು ನೀವು ಓದಿರುತ್ತೀರಿ. ಆದರೆ ಚಿತ್ರದ ಟೈಟಲ್ ಏನು ಎನ್ನುವುದನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅದು ಅನೌನ್ಸ್ ಆಗಿದೆ.
ಹಸನ್ಮುಖಿ ನಟ ಗಣೇಶ್ ಅಭಿನಯದ ಚಿತ್ರಕ್ಕೆ “ಮುಗುಳು ನಗೆ” ಎಂದು ಹೆಸರಿಡಲಾಗಿದೆಯಂತೆ. ಅಂತೂ ತಮ್ಮ ಸಕ್ಸಸ್ ಚಿತ್ರ ಮುಂಗಾರು ಮಳೆಯ ಎಂ ಅಕ್ಷರವನ್ನೇ ಇಟ್ಟುಕೊಂಡು ಮತ್ತೊಂದು ಯಶಸ್ಸು ಕೊಡುವುದಕ್ಕೆ ಹೊರಟಿದ್ದಾರೆ ಭಟ್ಟರು.
ಅಂದ ಹಾಗೆ ಇದಕ್ಕೆ ನಾಯಕಿ ಯಾರು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಇದರ ಹೊರತಾಗಿ ಉಳಿದ ತಾಂತ್ರಿಕ ವರ್ಗ ಭಟ್ಟರ ಹಿಂದಿನ ಸಿನಿಮಾದಲ್ಲಿರುವವರೇ ಆಗಿರುತ್ತಾರೆ. ಹರಿಕೃಷ್ಣ ಸಂಗೀತ, ಕೃಷ್ಣ ಕ್ಯಾಮಾರಾ ಕೈ ಚಳಕ ಸಿನಿಮಾದಲ್ಲಿರಲಿದೆ. ವಿಶೇಷ ಕ್ಯಾಮರಾ ವರ್ಕ್ ನಿಂದ ಗಮನ ಸೆಳೆಯುವ ಭಟ್ಟರ ಚಿತ್ರ ಇಲ್ಲಿಯೂ ಅದೇ ರೀತಿ ಮೋಡಿ ಮಾಡಲಿದೆಯಂತೆ.
ಯಾರೂ ಚಿತ್ರೀಕರಿಸದ ಲೊಕೇಷನ್ ನಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಐಡಿಯಾವನ್ನು ಭಟ್ಟರು ಇಟ್ಟುಕೊಂಡಿದ್ದಾರೆ. ಲೈಫು ಇಷ್ಟೇನೆ ಸಿನಿಮಾ ನಿರ್ಮಿಸಿದ ಎಸ್.ಎಸ್. ಮೂವೀಸ್ ಈ ಸಿನಿಮಾವನ್ನು ಮಾಡುತ್ತಿದೆ. ನಿರ್ಮಾಣದಲ್ಲಿ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಕೂಡಾ ಸಹಾಯ ಮಾಡಲಿದ್ದಾರಂತೆ. ಯೋಗರಾಜ್ ಭಟ್ ಮತ್ತು ಗೋಲ್ಡನ್ ಮೂವೀಸ್ ಸಹಯೋಗದಲ್ಲಿ ಸಿನಿಮಾ ಮೂಡಿ ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ