ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಈಗಾಗಲೆ ಹಲವಾರು ನಟ, ನಟಿ, ನಿರ್ದೇಶಕರು, ಗಾಯಕರು ಬಂದು ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದಾರೆ. ಈ ಬಾರಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ವೃತ್ತಿಯಲ್ಲಿ ಪ್ರೊಫೆಸರ್ ಆಗಿರುವ ನಾಗತಿಹಳ್ಳಿ ಚಂದ್ರಶೇಖರ್ ಕಥೆಗಾರರಾಗಿ ಚಿತ್ರರಂಗಕ್ಕೆ ಅಡಿಯಿಟ್ಟವರು. ಉಷಾಕಿರಣ, ಉದ್ಭವ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಉಂಡು ಹೋದ ಕೊಂಡು ಹೋದ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಬದಲಾದರು.
ಆ ಬಳಿಕ ಅಮೆರಿಕ ಅಮೆರಿಕ, ಪ್ಯಾರಿಸ್ ಪ್ರಣಯ, ನನ್ನ ಪ್ರೀತಿಯ ಹುಡುಗಿ, ಮಾತಾಡ್ ಮಾತಾಡ್ ಮಲ್ಲಿಗೆ, ಒಲವೇ ಜೀವನ ಲೆಕ್ಕಾಚಾರ ಚಿತ್ರಗಳನ್ನುನಿರ್ದೇಶಿಸಿದರು. ನಾಗತಿಹಳ್ಳಿ ಅವರ ಚಿತ್ರಗಳು ಮುಖ್ಯವಾಗಿ ಯಾವುದಾರೊಂದು ಸಾಮಾಜಿಕ ಕಳಕಳಿ ಸುತ್ತ ಇರುತ್ತವೆ. ಎಲ್ಲವೂ ಕುಟುಂಬ ಪ್ರಧಾನ ಚಿತ್ರಗಳು. ಮಾ.15ರಂದು ಸಂಜೆ 5 ಗಂಟೆಗೆ ಶಿವಾನಂದ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದೆ.