ದ್ವಾರಕೀಶ್ ಕಷ್ಟಕ್ಕೆ ಬಿದ್ದಾಗಲೆಲ್ಲಾ ಸಹಾಯ ಮಾಡಿದ್ದ ಸಾಹಸಸಿಂಹ ವಿಷ್ಣುವರ್ಧನ್

Krishnaveni K

ಮಂಗಳವಾರ, 16 ಏಪ್ರಿಲ್ 2024 (13:48 IST)
Photo Courtesy: Twitter
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮೇರು ಕಲಾವಿದರಲ್ಲಿ ದ್ವಾರಕೀಶ್ ಕೂಡಾ ಒಬ್ಬರು. ಅವರು ಇಂದು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಪ್ರೀತಿಯಿಂದ ಕುಳ್ಳ ಎಂದೇ ಕರೆಯಿಸಿಕೊಳ್ಳುತ್ತಿದ್ದ ದ್ವಾರಕೀಶ್ ಹಲವು ಸಿನಿಮಾಗಳಲ್ಲಿ ನಟನೆ ಜೊತೆಗೆ ನಿರ್ಮಾಪಕರಾಗಿಯೂ ಗುರುತಿಸಿಕೊಂಡವರು. ಸಿನಿಮಾ ನಿರ್ಮಾಣ ಎಂದರೆ ಸಹಜವಾಗಿಯೇ ಏಳು ಬೀಳುಗಳು ಇದ್ದೇ ಇರುತ್ತದೆ. ದ್ವಾರಕೀಶ್ ಬಿದ್ದಾಗಲೆಲ್ಲಾ ಅವರನ್ನು ಕೈ ಹಿಡಿದು ನಿಲ್ಲಿಸಿದ್ದು ಗೆಳೆಯ ಸಾಹಸಸಿಂಹ ಡಾ. ವಿಷ್ಣುವರ್ಧನ್.

ಇಬ್ಬರ ನಡುವೆ ಉತ್ತಮ ಗೆಳೆತನವಿತ್ತು. ಆದರೆ ನಾನೇ ಆತನ ಸ್ನೇಹವನ್ನು ಕೆಲವೊಮ್ಮೆ ದುರುಪಯೋಗ ಪಡಿಸಿಕೊಂಡೆ ಎಂದು ಸ್ವತಃ ದ್ವಾರಕೀಶ್ ತಮ್ಮ ಇಳಿವಯಸ್ಸಿನಲ್ಲಿ ಪಶ್ಚಾತ್ತಾಪ ಪಟ್ಟಿದ್ದು ಇದೆ. ದ್ವಾರಕೀಶ್-ವಿಷ್ಣುವರ್ಧನ್ ನಡುವೆ ಸ್ನೇಹದ ಜೊತೆಗೆ ಕೆಲವೊಮ್ಮೆ ಮಾತು ಬಿಟ್ಟ ಸಂದರ್ಭಗಳೂ ಇತ್ತು.

ಆದರೆ ಸ್ನೇಹಿತನಿಗೆ ಕಷ್ಟ ಎಂದಾಗಲೆಲ್ಲಾ ವಿಷ್ಣುವರ್ಧನ್ ಸಿನಿಮಾ ಮಾಡಿಕೊಟ್ಟು ಸಹಾಯ ಮಾಡಿದ್ದರು. ಇದಕ್ಕೆ ಉತ್ತಮ ಉದಾಹರಣೆ ಆಪ್ತಮಿತ್ರ ಸಿನಿಮಾ. ಈ ಸಿನಿಮಾ ಮಾಡುವ ಮೊದಲು ದ್ವಾರಕೀಶ್ ತೀರಾ ಕುಗ್ಗಿಹೋಗಿದ್ದರಂತೆ. ಆದರೆ ಆಪ್ತಮಿತ್ರಗೆ ವಿಷ್ಣುವರ್ಧನ್ ಕಾಲ್ ಶೀಟ್ ಕೊಟ್ಟ ಬಳಿಕ ಅವರ ಕಷ್ಟ ಕರಗಿತು. ಆಪ್ತಮಿತ್ರ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತು.

ಆದರೂ ಗಳಿಸಿದ ದುಡ್ಡನ್ನು ಉಳಿಸಿಕೊಳ್ಳಲು ದ್ವಾರಕೀಶ್ ಗೆ ಸಾಧ್ಯವಾಗಲಿಲ್ಲ. ತಮ್ಮ ಇಳಿವಯಸ್ಸಿನಲ್ಲೂ ಮನೆಗೆ ಕಟ್ಟಬೇಕಾಗಿದ್ದ ಬ್ಯಾಂಕ್ ಲೋನ್, ಸಾಲಗಳಿಂದ ಸಾಕಷ್ಟು ಕಷ್ಟ ಅನುಭವಿಸಿದ್ದರು. ಕೊನೆಗೆ ಎಚ್ಎಸ್ಆರ್ ಲೇಔಟ್ ನಲ್ಲಿದ್ದ ತಮ್ಮ ಮನೆಯನ್ನೇ ಮಾರಬೇಕಾಯಿತು.

ಅಷ್ಟು ದೊಡ್ಡ ಮನೆ ನನಗೆ ಬೇಕಾಗಿರಲಿಲ್ಲ. ಜೊತೆಗೆ ಬ್ಯಾಂಕ್ ಲೋನ್ ಗಳಿತ್ತು. ಹೀಗಾಗಿ ಮನೆ ಮಾರಿದೆ ಎಂದು ದ್ವಾರಕೀಶ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮುಂತಾದ ದಿಗ್ಗಜರೊಂದಿಗೆ ನಟಿಸಿದ ಕಲಾವಿದ ಇಂದು ಮರೆಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ