ಸಮಸ್ಯೆ ಬಂದಾಗ ನಿರ್ಮಾಪಕರು ಒಗ್ಗಟ್ಟಾಗುವಂತೆ ಕಲಾವಿದರು ಇನ್ನೊಬ್ಬ ಕಲಾವಿದನ ಬಗ್ಗೆ ಧ್ವಿನಿ ಎತ್ತಲ್ಲ!

ಗುರುವಾರ, 20 ಜುಲೈ 2023 (08:30 IST)
ಬೆಂಗಳೂರು: ಸಿನಿಮಾವಿರಲಿ, ಧಾರವಾಹಿಯಿರಲಿ, ಬಣ್ಣದ ಬದುಕಿನಲ್ಲಿ ಕಲಾವಿದರು ಮತ್ತು ನಿರ್ಮಾಪಕರ ನಡುವೆ ವೈಮನಸ್ಯ ಬಂದಾಗ ಹೆಚ್ಚಾಗಿ ಕಲಾವಿದನೇ ನಷ್ಟ ಅನುಭವಿಸುತ್ತಾನೆ. ಇದಕ್ಕೆ ಕಾರಣವೂ ಇದೆ.

ಕಿರುತೆರೆ ಇರಲಿ, ಹಿರಿತೆರೆ ಇರಲಿ, ಯಾವುದೇ ಸಮಸ್ಯೆ ಬಂದಾಗ ನಿರ್ಮಾಪಕರು ಒಗ್ಗಟ್ಟಾಗುವಂತೆ ಕಲಾವಿದರು ಇನ್ನೊಬ್ಬ ಕಲಾವಿದನಿಗಾದ ಅನ್ಯಾಯವನ್ನು ಪ್ರಶ್ನಿಸುವ ಅಥವಾ ಬಹಿರಂಗವಾಗಿ ಅವರ ಜೊತೆ ನಿಲ್ಲುವ ಸಾಹಸ ಮಾಡುವುದಿಲ್ಲ.

ಕಾರಣ, ಅನ್ನದಾತ ನಿರ್ಮಾಪಕನೇ ಆಗಿರುತ್ತಾನೆ. ಯಾರಿಗೇ ಆದರೂ ಕೊನೆಗೆ ಲಾಭವೇ ಮುಖ್ಯವಾಗುತ್ತದೆ. ಕಲಾವಿದ ಹೊಟ್ಟೆಪಾಡಿಗಾಗಿ ನಟನೆ ಮಾಡುತ್ತಾನೆ. ಆತನಿಗೆ ಕೆಲಸ ಕೊಡುವವರು ನಿರ್ಮಾಪಕರೇ ಆಗಿರುತ್ತಾರೆ. ಹೀಗಾಗಿ ಒಬ್ಬ ಕಲಾವಿದನಿಗೆ ಎಷ್ಟೇ ಅನ್ಯಾಯವಾದರೂ ಅಥವಾ ಏನೇ ಸಮಸ್ಯೆಗಳಾದರೂ ಆತನಿಗೆ ಇತರ ಕಲಾವಿದರಿಂದ ಸಹಾಯ ಸಿಗುವುದಿಲ್ಲ.

ಇದೀಗ ಕಿಚ್ಚ ಸುದೀಪ್ ಉದಾಹರಣೆಯನ್ನೇ ತೆಗೆದುಕೊಳ್ಳಿ. ತಪ್ಪು ಯಾರದ್ದೇ ಆಗಿರಬಹುದು. ನಿರ್ಮಾಪಕ ಎಂಎನ್ ಕುಮಾರ್ ಧರಣಿ ಕೂತಾಗ ಅವರ ಜೊತೆಗೆ ಬಂದು ಕೆಲವು ನಿರ್ಮಾಪಕರು ಸೇರಿಕೊಂಡು ಬಹಿರಂಗವಾಗಿ ಬೆಂಬಲದ ಮಾತನಾಡಿದ್ದಾರೆ. ಆದರೆ ಸುದೀಪ್ ಗೆ ಬೆಂಬಲಿಸುವುದಾಗಿ ಯಾವ ಕಲಾವಿದರೂ ಘೋಷಿಸಿಲ್ಲ.

ಈ ಹಿಂದೆ ನಟ ಅನಿರುದ್ಧ್ ಜತ್ಕಾರ್ ಮತ್ತು ಜೊತೆ ಜೊತೆಯಲಿ ಧಾರವಾಹಿ ನಿರ್ಮಾಪಕರ ನಡುವೆ ವೈಮನಸ್ಯವಾದಾಗ ನಿರ್ಮಾಪಕರ ಜೊತೆ ಇಡೀ ನಿರ್ಮಾಪಕರ ಸಂಘವೇ ಬಂದು ಬೆಂಬಲ ನೀಡಿತ್ತು. ಆದರೆ ಅನಿರುದ್ಧ್ ಪರವಾಗಿ ಯಾವ ಕಲಾವಿದರೂ ಧ್ವನಿಯೆತ್ತುವ ಧೈರ್ಯ ಮಾಡಲಿಲ್ಲ.

ಕಿರುತೆರೆಯಲ್ಲಂತೂ ಅನೇಕ ಬಾರಿ ಕಲಾವಿದರ ಬದಲಾವಣೆಗಳಾಗುತ್ತಿರುತ್ತದೆ. ಹಿರಿತೆರೆಯಲ್ಲೂ ಅನೇಕ ಬಾರಿ ನಿರ್ಮಾಪಕ-ಕಲಾವಿದರ ನಡುವೆ ವೈಮನಸ್ಯವಾಗಿದ್ದು ಇದೆ. ಆದರೆ ಯಾವ ಕಲಾವಿದರೂ ತಮ್ಮ ಸಹ ಕಲಾವಿದರ ಬಗ್ಗೆ ಬಹಿರಂಗವಾಗಿ ಧ್ವನಿಯೆತ್ತುವ ಸಾಹಸ ಮಾಡುವುದಿಲ್ಲ.

ಇದಕ್ಕೆ ಕಾರಣ ಹೊಟ್ಟೆಪಾಡು ಎನ್ನುತ್ತಾರೆ. ಕಲಾವಿದರೊಬ್ಬರು. ಕಲಾವಿದನ ತಪ್ಪು ಏನೂ ಇಲ್ಲ ಎಂದು ಕೆಲವೊಮ್ಮೆ ಅನಿಸಿದರೂ ಸಹಕಲಾವಿದರು ಮಾತನಾಡಲು ಹೋಗುವುದಿಲ್ಲ. ಕಾರಣ, ಅವರಿಗೆ ಸಂಬಳ ಕೊಡುವವರು ನಿರ್ಮಾಪಕರಾಗಿರುತ್ತಾರೆ. ತಮ್ಮ ಅನ್ನಕ್ಕೆ ಕುತ್ತು ತಂದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಯಾಕೆಂದರೆ ಒಬ್ಬ ನಿರ್ಮಾಪಕನಿಗೆ ಇವನಲ್ಲದಿದ್ದರೆ ಮತ್ತೊಬ್ಬ ಕಲಾವಿದ ಸಿಕ್ಕೇ ಸಿಗುತ್ತಾನೆ. ಆದರೆ ಅವಕಾಶ ವಂಚಿತನಾಗುವುದು ಕಲಾವಿದ. ಹೀಗಾಗಿ ನಿರ್ಮಾಪಕರಿಗಿರುವ ಒಗ್ಗಟ್ಟು ಕಲಾವಿದರಲ್ಲಿ ಕಾಣುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ