ಬೆಂಗಳೂರು: ಮೊನ್ನೆಯಷ್ಟೇ ಮದುವೆಯಾದ ಸ್ಯಾಂಡಲ್ ವುಡ್ ರಾಜಾ ರಾಣಿ ಯಶ್ ಮತ್ತು ರಾಧಿಕಾ ಪಂಡಿತ್ ಇಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗಾಗಿಯೇ ಆರತಕ್ಷತೆ ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಭಾಗಿಯಾದರು.
40 ಸಾವಿರಕ್ಕೂ ಅಧಿಕ ಮಂದಿ ಯಶ್ ಏರ್ಪಡಿಸಿದ್ದ ಭೂರಿ ಭೋಜನ ಸೇವಿಸಿದರು ಎಂದು ಮೂಲಗಳು ಹೇಳಿವೆ. ಇದೇ ವೇಳೆ ಮಂಡ್ಯದ ಗಂಡಿನ ಅವತಾರದಲ್ಲಿ ಅಭಿಮಾನಿಗಳೆದುರು ಬಂದ ಯಶ್ ಮತ್ತು ರಾಧಿಕಾ ಅಭಿಮಾನಿಗಳತ್ತ ಕೈ ಬೀಸಿದರು. ಅಲ್ಲದೆ ಯಶ್ ತಮ್ಮ ಸಿನಿಮಾದ ಕೆಲವು ಡೈಲಾಗ್ ಹೇಳಿ ರಂಜಿಸಿದರು.
ಯಶ್ ಮತ್ತು ರಾಧಿಕಾ ಕುಟುಂಬದವರೂ ಈ ಸಂದರ್ಭದಲ್ಲಿ ಹಾಜರಿದ್ದರು. ಭದ್ರತೆಗಾಗಿ ಸುಮಾರು 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ಸುಡು ಬಿಸಿಲಲ್ಲಿ ನಿಂತುಕೊಂಡೇ ಅಭಿಮಾನಿಗಳನ್ನು ರಂಜಿಸಿದ ಯಶ್ ಮತ್ತು ರಾಧಿಕಾ ಊಟ ಮಾಡಿಕೊಂಡು ಹೋಗುವಂತೆ ಅಭಿಮಾನಿಗಳನ್ನು ವಿನಂತಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ