ಎಲ್ಲಿದ್ದೆ ಇಲ್ಲಿತನಕ ಅನ್ನೋ ಶೀರ್ಷಿಕೆಯ ಹಿಂದೆ ಸೃಜನ್ಗೆ ತನ್ನ ತಂದೆ ಲೋಕೇಶ್ರ ಮೇಲಿರೋ ಸೆಂಟಿಮೆಂಟ್ ಇದೆ. ಇದು ಲೋಕೇಶ್ ಅಭಿನಯಿಸಿದ್ದ ಎಲ್ಲಿಂದಲೋ ಬಂದವರು ಚಿತ್ರದ ಎಲ್ಲೆದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ ಎಂಬ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡಿರೋ ಚಿತ್ರ. ಇದರ ಸಾಲನ್ನೇ ಶೀರ್ಷಿಕೆಯಾಗಿ ಆರಿಸಿಕೊಂಡಿರೋದರಿಂದಾಗಿ ಸೃಜನ್ ಅವರಲ್ಲೊಂದು ಜವಬ್ದಾರಿ ತುಂಬಿದ ಭಯವಿದೆ. ಅಪ್ಪನ ಸಿನಿಮಾ ಹಾಡಿನ ಸಾಲುಗಳನ್ನೇ ಶೀರ್ಷಿಕೆಯಾಗಿಸಿಕೊಂಡಿರೋ ಈ ಚಿತ್ರವನ್ನು ಆರಂಭದಿಂದಲೂ ಆ ಎಚ್ಚರಿಕೆಯಿಂದಲೇ ಸೃಜನ್ ರೂಪಿಸಿದ್ದಾರೆ.
ನಿರ್ದೇಶಕ ತೇಜಸ್ವಿಯವರಂತೂ ಇದು ತಮ್ಮ ಜವಾಬ್ದಾರಿಯೂ ಹೌದೆಂಬಂತೆ ತುಂಬಾನೇ ಆಸ್ಥೆಯಿಂದ ಈ ಸಿನಿಮಾವನ್ನು ರೂಪಿಸಿದ್ದಾರೆ. ಬರೀ ಕಥೆಗಾಗಿ ಅವರು ನಡೆಸಿದ ಸರ್ಕಸ್ಸುಗಳೇ ಈ ಸಿನಿಮಾವನ್ನು ಅವರೆಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂಬುದಕ್ಕೆ ಸ್ಪಷ್ಟ ಸಾಕ್ಷಿಯಂತಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಇದರ ಕಥೆಗಾಗಿ ಇಡೀ ತಂಡ ಶ್ರಮಿಸಿದೆ. ಅದೆಷ್ಟೋ ಕಥಾ ಎಳೆಗಳನ್ನು ರೂಪಿಸಿ ಕೈ ಬಿಟ್ಟಿದೆ. ಕಡೆಗೂ ಸೃಜನ್ ಅವರನ್ನು ಹೊಸಾ ಬಗೆಯಲ್ಲಿ ತೋರಿಸುವಂಥಾ, ಎಲ್ಲ ಅಂಶಗಳನ್ನೂ ಒಳಗೊಂಡ ಕಥೆಯನ್ನು ಆರಿಸಿಕೊಂಡು ಅದಕ್ಕೆ ಎಲ್ಲಿದ್ದೆ ಇಲ್ಲಿತನಕ ಎಂಬ ನಾಮಕರಣ ಮಾಡಲಾಗಿದೆ. ಈ ಚಿತ್ರ ಇದೇ ತಿಂಗಳ 11 ರಂದು ತೆರೆಗಾಣಲಿದೆ.