ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿರ್ಮಾಣದಲ್ಲಿ ಸಿದ್ಧವಾಗಿರುವ ಜಸ್ಟ್ ಮಾರೀಡ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿದೆ.
ಎಬಿಬಿಎಸ್ ಸ್ಟುಡಿಯೋಸ್ ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಈ ಪ್ರೇಮ ಕಥಾನಕವನ್ನು ನಿರ್ಮಾಣ ಮಾಡಿದ್ದಾರೆ. ಮತ್ತೊಬ್ಬ ಸಂಗೀತ ನಿರ್ದೇಶಕ ಸಿ.ಆರ್.ಬಾಬಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದೆ. ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ಆರು ಸುಮಧುರ ಹಾಡುಗಳಿದ್ದು ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿ.ಆರ್ ಬಾಬಿ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ.ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು.