ಚಿತ್ರ ವಿಮರ್ಶೆ: ಮೂವರು ಸ್ನೇಹಿತರ ಕನಸಿನ ಕತೆ ಜಾನ್ ಜಾನಿ ಜನಾರ್ಧನ್
ಶನಿವಾರ, 10 ಡಿಸೆಂಬರ್ 2016 (08:45 IST)
ಬೆಂಗಳೂರು: ಮನುಷ್ಯ ಹೆಚ್ಚು ಆಸೆ ಪಡುವುದು ಒಂದು ಆಗುವುದು ಇನ್ನೊಂದು. ಜಾನ್ ಜಾನಿ ಜನಾರ್ಧನ್ ಎನ್ನುವ ಮೂವರು ಸ್ನೇಹಿತರ ಬದುಕಲ್ಲಿ ನಡೆಯುವುದೂ ಇದೇ.
ಮೂವರು ಸ್ನೇಹಿತರಿಗೆ ಬ್ಯಾಂಕಾಕ್ ನ ಬೀಚ್ ನಲ್ಲಿ ಸುತ್ತಾಡುವ ಆಸೆ. ಅಲ್ಲಿ ಸುಂದರ ಹುಡುಗಿಯರ ಜತೆ ಕುಣಿಯುವ ಕನಸು. ಸಹಜವಾಗಿ ಬಿಸಿ ರಕ್ತದ ಹುಡುಗರಿಗೆ ಇರುವ ಬಯಕೆಗಳೇ. ಆದರೆ ಅವರ ಕನಸಿನಷ್ಟು ದೊಡ್ಡ ಸಂಪಾದನೆ ಅವರಿಗಿಲ್ಲ. ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುವವರಿಗೆ ದೊಡ್ಡ ಕನಸನ್ನು ನನಸು ಮಾಡಿಕೊಳ್ಳಲು ಎಷ್ಟು ಕಷ್ಟ ಎಂಬುದು ಇಲ್ಲಿ ಗೊತ್ತಾಗುತ್ತದೆ.
ಹಾಗೂ ಹೀಗೂ ಹಣ ಹೊಂದಿಸಿಕೊಂಡು ಕನಸು ಈಡೇರಿಸಿಕೊಳ್ಳಲು ಹೊರಟರೆ ಇನ್ನೇನೋ ಆಗಿ ಆ ಹಣ ಮತ್ಯಾವುದಕ್ಕೋ ಖರ್ಚಾಗಿ ಹೋಗಿರುತ್ತದೆ. ಅದರ ಮಧ್ಯೆ ಒಂದು ಅಪ್ರಾಪ್ತ ವಯಸ್ಸಿನ ಬಾಲಕ ನಿಗೂಢವಾಗಿ ಕಣ್ಮರೆಯಾಗುವುದು, ಅತ್ಯಾಚಾರ ಇಂತಹ ಸೀರಿಯಸ್ ವಿಷಯಗಳು ಬಂದು ಹೋಗುತ್ತದೆ.
ಇದರ ಮಧ್ಯೆ ಸೀರಿಯಸ್ ವಿಷಯಗಳೂ ಮನರಂಜನೆ ಒದಗಿಸುತ್ತದೆ. ಕೊನೆಗೆ ಅಪ್ರಾಪ್ತ ಹೆಣ್ಣು ಮಕ್ಕಳ ಉಳಿಸಿ ಎಂಬ ಸಂದೇಶ ಕೊಡುತ್ತದೆ. ಕೊನೆಗೂ ಮೂವರು ಸ್ನೇಹಿತರ ಕನಸು ಈಡೇರುತ್ತದಾ ಎಂದು ನೋಡಬೇಕಾದರೆ, ಥಿಯೇಟರ್ ಗೆ ಹೋಗಬೇಕು.
ಇಲ್ಲಿ ಹೇಳಿಕೊಳ್ಳುವಂತಹ ವಿಷಯವೇನಿಲ್ಲ. ಮಲಯಾಳಂನ ಅಮರ್ ಅಕ್ಬರ್ ಆಂಥೋನಿ ಎಂಬ ಸಿನಿಮಾದ ರಿಮೇಕ್. ಮನರಂಜನೆ ಒದಗಿಸುವುದಷ್ಟೇ ನಿರ್ದೇಶಕರ ಉದ್ದೇಶ. ಮಧ್ಯೆ ಬರುವ ಕೆಲವು ಡಬ್ಬಲ್ ಮೀನಿಂಗ್ ಸಂಭಾಷಣೆಗಳು ಪಡ್ಡೆ ಹುಡುಗರ ಶಿಳ್ಳೆ ಗಿಟ್ಟಿಸುತ್ತದೆ. ಅದು ಬಿಟ್ಟರೆ ಕೆಲವು ಹಾಡುಗಳು ಕೇಳುವಂತಿದೆ. ಆಂದ್ರಿತಾ ರೇ ಒಂದು ಹಾಡಿನಲ್ಲಿ ಕುಣಿದು ಹೋಗುತ್ತಾರೆ. ಮಾಲಾ ಶ್ರೀ ಕೊನೆಯಲ್ಲಿ ಬಂದು ವಿಜೃಂಭಿಸುತ್ತಾರೆ. ಅದು ಬಿಟ್ಟರೆ ಅಜೇಯ್ ರಾವ್, ಲೂಸ್ ಮಾದ ಯೋಗಿ ಮತ್ತು ಡಾರ್ಲಿಂಗ್ ಕೃಷ್ಣ ಮಾತ್ರ ಚಿತ್ರದಲ್ಲಿ ಕಾಣಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ