ನಾಸ್ತಿಕ-ಆಸ್ತಿಕರ ನಡುವೆ ಮುಕುಂದ ಮುರಾರಿ

ಕೃಷ್ಣವೇಣಿ ಕೆ

ಶನಿವಾರ, 29 ಅಕ್ಟೋಬರ್ 2016 (09:07 IST)
ಬೆಂಗಳೂರು: ಹಿಂದಿಯ ಓ ಮೈ ಗಾಡ್ ಸಿನಿಮಾ ನೋಡಿದವರಿಗೆ ಇದರ ಕತೆಯಲ್ಲೇನೂ ಹೊಸತನ ಕಾಣದು. ಆದರೆ ಕನ್ನಡದಲ್ಲಿ ಈ ಚಿತ್ರವನ್ನು ಹೇಗೆ ಮಾಡಿದ್ದಾರೆ ಎನ್ನುವ ಕುತೂಹಲವಿದ್ದರೆ ನೋಡಬಹುದು.
ಒಬ್ಬ ನಾಸ್ತಿಕ. ಸದಾ ದೇವರನ್ನು ಬೈಯುವ, ಅವನ ಇರುವಿಕೆಯನ್ನು ಪ್ರಶ್ನಿಸುವ ಅವನಿಗೆ ದೇವರೇ ದಾರಿ ತೋರಿಸುತ್ತಾನೆ. ತನ್ನ ಕೇರಿಯಲ್ಲಿ ದೇವರ ಮೂರ್ತಿಗಳನ್ನು ಮಾರುವ ಅಂಗಡಿ ಇಟ್ಟುಕೊಂಡಿರುತ್ತಾನೆ. ಒಂದು ದಿನ ಇದ್ದಕ್ಕಿದ್ದಂತೆ ಭೂಕಂಪ ಸಂಭವಿಸುತ್ತದೆ. ಯಾರಿಗೂ ಏನಾಗದಿದ್ದರೂ ಅವನ ಅಂಗಡಿ ಮಾತ್ರ ನಾಶವಾಗುತ್ತದೆ. ಊರವರೆಲ್ಲಾ ಇದಕ್ಕೆಲ್ಲಾ ಅವನ ನಾಸ್ತಿಕತೆಯೇ ಕಾರಣ ಎನ್ನುತ್ತಾರೆ.

ತನ್ನ ಅಂಗಡಿಯ ವಿಮೆ ಪಡೆಯಲು ಅಧಿಕಾರಿಗಳ ಬಳಿಗೆ ಹೋದರೆ ಅವರು ಇದು ಪ್ರಾಕೃತಿಕ ವಿಕೋಪ. ಇದಕ್ಕೆ ವಿಮೆ ಕೊಡಲಾಗುವುದಿಲ್ಲ ಎನ್ನುತ್ತಾರೆ. ಸಹಜವಾಗಿ ಅವನಿಗೆ ಸಿಟ್ಟು ಬರುತ್ತದೆ. ದೇವರ ಮೇಲೆಯೇ ಕೇಸು ಜಡಿಯುತ್ತಾನೆ. ಮುಂದೇನಾಗುತ್ತದೆ ಎಂದು ಥಿಯೇಟರ್ ನಲ್ಲಿ ನೋಡಿ.

ದೇವರನ್ನೇ ಬೈಯುವ ಹುಂಬನಾಗಿ ಉಪೇಂದ್ರ ಸಹಜಾಭಿನಯ ಮಾಡಿದ್ದಾರೆ. ರಿಯಲ್ ಎಸ್ಟೇಟ್ ದಲ್ಲಾಳಿಯ ವೇಷದಲ್ಲಿ ಬರುವ ಸುದೀಪ್ ಸದಾ ಕೂಲ್ ಕೂಲ್. ತಾಳ್ಮೆಯ, ಮುಗುಳ್ನೆಗೆಯ ಮೂಲಕವೇ ನಮ್ಮನ್ನು ಸೆಳೆಯುತ್ತಾರೆ. ನಾಸ್ತಿಕ ಗಂಡನ ಆಸ್ತಿಕ ಪತ್ನಿಯಾಗಿ ನಿಖಿತಾ ತುಕ್ರಾಲ್ ಚೆನ್ನಾಗಿ ಅಭಿನಯಿಸಿದ್ದಾರೆ. ಅಲ್ಲಲ್ಲಿ ದೇವರನ್ನು ಅತಿಯಾಗಿ ನಂಬುವವರಿಗೆ ಟಾಂಗ್ ಕೊಡುವ ಡೈಲಾಗ್ ಗಳೂ ಇವೆ. ದೇವರನ್ನು ನಂಬಬೇಕು ಎನ್ನುವ ಸಂದೇಶವೂ ಇದೆ.

ಇನ್ನು ರವಿಶಂಕರ್, ಅವಿನಾಶ್, ಶಿವರಾಆಂ, ತಬಲಾ ನಾಣಿ, ದೇವರಾಜ್ ಪ್ರತಿಯೊಬ್ಬರೂ ನೆನಪಿನಲ್ಲುಳಿಯುತ್ತಾರೆ. ಅರ್ಜುನ್ ಜನ್ಯಾ ಸಂಗೀತ ಕಿವಿಗೆ ಇಂಪು ಕೊಡುತ್ತದೆ. ಸುಧಾಕರ ರಾಜ್ ಅವರ ಕ್ಯಾಮರಾ ಕೈ ಚಳಕ ಎದ್ದು ಕಾಣುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ