ಪ್ರಭಾವಿಗಳು ನುಂಗಿದ ಅರಣ್ಯ ಭೂಮಿಯನ್ನು ತೆರವುಗೊಳಿಸಿದ ಸರ್ಕಾರ

ಶುಕ್ರವಾರ, 27 ಸೆಪ್ಟಂಬರ್ 2013 (10:37 IST)
PR
PR
ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರೊಬ್ಬರ ಪುತ್ರನು ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು 35 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾನೆ. ಆದ್ರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಭಾವಿಗಳ ಪ್ರಯತ್ನಕ್ಕೆ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ಲ, 35 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಇಂದಾವರದಲ್ಲಿನ ಕಾಫಿ ತೋಟಕ್ಕೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ 35 ಎಕರೆ ಭೂಮಿಯನ್ನು ಝಕೀರ್ ಉರ್ ರೆಹಮಾನ್ ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ಭೂಮಿಯನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ರೆಹ್ಮಾನ್ ಗೆ ಮೂರುಬಾರಿ ನೋಟೀಸ್‌ ಜಾರಿ ಮಾಡಿದ್ದರೂ ಅದಕ್ಕೆ ಕ್ಯಾರೆ ಎನ್ನಲಿಲ್ಲ. ಹೀಗಾಗಿ ಇಂದು ಮುಂಜಾನೆ ಡಿಎಫ್ಓ ರವಿನಾರಾಯಣ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ತಂಡ ತೆರವು ಕಾರ್ಯಾಚರಣೆ ಕೈಗೊಂಡಿತು.

35 ಎಕರೆ ವ್ಯಾಪ್ತಿಯಲ್ಲಿ ನೆಟ್ಟಿದ್ದ ಸಾವಿರಾರು ಕಾಫಿ ಸಸಿಗಳನ್ನು ಅರಣ್ಯ ಸಿಬ್ಬಂಧಿಗಳು ಕಡಿದು ಹಾಕಿದರು. ಈ ಮೂಲಕ ಸರ್ಕಾರಿ ಭೂಮಿಯನ್ನು ಯಾರೇ ಒತ್ತುವರಿ ಮಾಡಿಕೊಂಡರೂ, ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂಬ ದಿಟ್ಟ ಉತ್ತರವನ್ನು ರವಿ ನಾರಾಯಣ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ