ಭಾರತೀಯ ವಿದ್ಯಾಭವನ ನಿರ್ದೇಶಕ ಡಾ. ಮತ್ತೂರು ಕೃಷ್ಣಮೂರ್ತಿ ವಿಧಿವಶ

ಗುರುವಾರ, 6 ಅಕ್ಟೋಬರ್ 2011 (11:16 IST)
ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಪದ್ಮಶ್ರೀ ವಿದ್ವಾನ್ ಡಾ. ಮತ್ತೂರು ಕೃಷ್ಣಮೂರ್ತಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮತ್ತೂರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1929 ಆಗಸ್ಟ್ 8ರಂದು ಶಿವಮೊಗ್ಗ ಜಿಲ್ಲೆಯ ಮತ್ತೂರ ಗ್ರಾಮದಲ್ಲಿ ಜನಿಸಿದ್ದ ಕೃಷ್ಣಮೂರ್ತಿ ಅವರ ಕುಮಾರವ್ಯಾಸ ಭಾರತ ವ್ಯಾಖ್ಯಾನಕ್ಕೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು. ಕುಮಾರ ಪರ್ವ, ದ್ರೌಪದಿ ಸ್ವಯಂವರ, ಮಹಾಭಾರ ಉದ್ಯೋಗ ಪರ್ವ ಸೇರಿದಂತೆ ಭಾರತೀಯ ಹಬ್ಬಗಳ ಕುರಿತು ನಿರ್ದೇಶನ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಮತ್ತೂರಿನಲ್ಲಿ ರಾಮಕೃಷ್ಣಯ್ಯ ಮತ್ತು ನಂಜಮ್ಮ ದಂಪತಿಯ ಪುತ್ರರಾಗಿ ಜನಿಸಿದ ಮತ್ತೂರು ಕೃಷ್ಣಮೂರ್ತಿ ಅವರು ಭಾರತೀಯ ವಿದ್ಯಾಭವನದ ಲಂಡನ್‌ ಶಾಖೆಯ ಸ್ಥಾಪನೆ ಮಾಡುವ ಮೂಲಕ ಲಂಡನ್‌ನಲ್ಲೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಮಹತ್ತರವಾದ ಕೆಲಸವನ್ನು ಮಾಡಿದ್ದಾರೆ.

1965ರಲ್ಲಿ ಮೈಸೂರಿನ ಮಿನರ್ವ ಮಿಲ್ಸ್‌ನಲ್ಲಿ ಸಹಾಯಕ ಟೈಮ್‌ ಆಫೀಸರ್‌ ಆಗಿ ವೃತ್ತಿ ಜೀವನ ಆರಂಭಿಸಿದ ಮತ್ತೂರು ಕೃಷ್ಣ ಮೂರ್ತಿ ಅವರು 1967ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು.

1968ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಮಕ್ಕಳ ನಾಟಕ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

1969ರಲ್ಲಿ ಭಾರತೀಯ ವಿದ್ಯಾಭವನದ ಬೆಂಗಳೂರು ಕೇಂದ್ರದ ರಿಜಿಸ್ಟ್ರಾರ್‌ ಆಗಿ ಅಧಿಕಾರ ಸ್ವೀಕರಿಸಿದ ಮತ್ತೂರು ಕೃಷ್ಣಮೂರ್ತಿ ಅವರು ಹಲವಾರು ಕಾಲೇಜುಗಳು ಹಾಗೂ ಸಾಂಸ್ಕೃತಿಕ ಸಂಘಗಳಲ್ಲಿ ಉಪನ್ಯಾಸ ನೀಡಿದರು. ಕುಮಾರ ವ್ಯಾಸ ಭಾರತದ ಬಗ್ಗೆ ಉಪನ್ಯಾಸ ನೀಡಿದ್ದಲ್ಲದೇ ಮಹಾತ್ಮ ಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯಾದ್ಯಂತ ಉಪನ್ಯಾಸ ಕಾರ್ಯಕ್ರಮ ನೀಡಿದರು.

1972ರಿಂದ 1995 ರ ವರೆಗೆ ಭಾರತೀಯ ವಿದ್ಯಾಭವನ ಲಂಡನ್‌ ಶಾಖೆಯ ರಿಜಿಸ್ಟ್ರಾರ್‌ ಆಗಿ ಕಾರ್ಯ ನಿರ್ವಹಿಸಿದರು. 10x10 ಅಳತೆಯ ಚಿಕ್ಕ ಕೊಠಡಿಯಲ್ಲಿ ಆರಂಭವಾದ ಭಾರತೀಯ ವಿದ್ಯಾಭವನ ಶಾಖೆ ಇಂದು ವೆಸ್ಟ್‌ ಕಿಂಗ್‌ಸ್ಟನ್‌ನಲ್ಲಿರುವ 14800 ಚದರಡಿ ಪ್ರದೇಶದಲ್ಲಿ ವಿಶಾಲವಾದ ಕಚೇರಿ ಹೊಂದಿದ್ದು, ಲಂಡನ್‌ ಕೇಂದ್ರದ ಮೂಲಕ ಭಾರತೀಯ ಸಂಸ್ಕೃತಿಯನ್ನು ವಿದೇಶಿಯರಿಗೆ ಪರಿಚಯಿಸುವಲ್ಲಿ ಮತ್ತೂರು ಕೃಷ್ಣ ಮೂರ್ತಿ ಅವರ ಪರಿಶ್ರಮ ಅಪಾರವಾಗಿದೆ.

ವೇಲ್ಸ್‌ ರಾಜಕುಮಾರ, ಬ್ರಿಟನ್‌ನ ಇಬ್ಬರು ಪ್ರಧಾನಿಗಳು ಭಾರತೀಯ ವಿದ್ಯಾಭವನದ ಲಂಡನ್‌ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಮತ್ತೂತು ಕೃಷ್ಣಮೂರ್ತಿ ಅವರು ಹಿಂದೂ ಸಂಸ್ಕೃತಿ ಕುರಿತು ನೀಡಿರುವ 120ಕ್ಕೂ ಹೆಚ್ಚು ಉಪನ್ಯಾಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ.

ಬೆಂಗಳೂರಿನಲ್ಲಿ ಭಾರತೀಯ ವಿದ್ಯಾಭವನದಿಂದ 1998ರಲ್ಲಿ ಸಂಗೀತ ಹಾಗೂ ನೃತ್ಯ ತರಗತಿಗಳನ್ನು ಆರಂಭಿಸುವಲ್ಲೂ ಸಹಾ ಮತ್ತೂರು ಕೃಷ್ಣ ಮೂರ್ತಿ ಅವರು ಪ್ರಮುಖ ಪಾತ್ರ ವಹಿಸಿದರು.

ರಾಜ್ಯ ಸರಕಾರದ ಸಹಯೋಗದಲ್ಲಿ ಮಹಾತ್ಮ ಗಾಂಧಿ ಅವರ ಕೃತಿ ಸಾಹಿತ್ಯ ಮಾಲಿಕೆಯ ನೂರು ಸಂಪುಟಗಳನ್ನು ಪ್ರಕಟಿಸುವ ಯೋಜನೆಯನ್ನು ಭಾರತೀಯ ವಿದ್ಯಾಭವನವು ಹಮ್ಮಿಕೊಂಡಿದ್ದು, ಈ ಪೈಕಿ 10 ಸಂಪುಟಗಳು ಪ್ರಕಟವಾಗಿದ್ದು, ಇದಕ್ಕೆ ಮತ್ತೂರು ಕೃಷ್ಣ ಮೂರ್ತಿ ಅವರ ಪರಿಶ್ರಮವೇ ಕಾರಣ

ಭಾರತೀಯ ವಿದ್ಯಾಭವನ ಲಂಡನ್‌ ಶಾಖೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಹಲವಾರು ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿದ ಮತ್ತೂರು ಕೃಷ್ಣ ಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ.

ಮತ್ತೂರು ಕೃಷ್ಣಮೂರ್ತಿ ಅವರ ನಿಧನದಿಂದಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭಾರತೀಯ ವಿದ್ಯಾಭವನಕ್ಕೆ ಅಪಾರವಾದ ಸೇವೆ ಸಲ್ಲಿಸಿರುವ ಮತ್ತೂರು ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ