ರೈತಸಂಘ-ಕರವೇಯನ್ನು ನಿಷೇಧಿಸಿಲ್ಲವಲ್ಲ: ಶಂಕರಮೂರ್ತಿ

ಗುರುವಾರ, 29 ಜನವರಿ 2009 (18:17 IST)
ಮಂಗಳೂರಿನ ಪಬ್‌‌ವೊಂದರಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಶ್ರೀರಾಮ ಸೇನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.

ರೈತ ಸಂಘ ಮತ್ತು ಕರವೇ ತಮ್ಮದೇ ಕಾರಣಗಳಿಗಳಿಗೆ ದಾಳಿ ನಡೆಸಿರಬಹುದು. ಆದರೆ ಅವುಗಳನ್ನು ಸರ್ಕಾರಗಳೇನು ನಿಷೇಧಿಸಲಿಲ್ಲ. ಈಗಲೂ ಮುಖ್ಯಮಂತ್ರಿ ಅವರು ಶ್ರೀರಾಮಸೇನೆಯನ್ನು ನಿಷೇಧಿಸುತ್ತೇವೆ ಎಂಬ ಮಾತನ್ನು ಹೇಳಿಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಶ್ರೀರಾಮ ಸೇನೆ ನಡೆಸಿರುವ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಈ ಘಟನೆಯನ್ನು ಬಳಸಿಕೊಂಡು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ, ಮಂಗಳೂರಿನಲ್ಲಿ ಕೇವಲ ಒಂದು ಪಬ್ ಮೇಲೆ ದಾಳಿ ನಡೆದಿದೆ. ಅಲ್ಲಿ ನೂರು ಪಬ್ ಮೇಲೆ ದಾಳಿ ನಡೆಸಿಲ್ಲ. ಭೂಕಂಪವೂ ಸಂಭವಿಸಿರಲಿಲ್ಲ. ಆದರೆ ಘಟನೆ ನಡೆದ ಒಂದು ಗಂಟೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದರೆ ಏನರ್ಥ ಎಂದು ಕಿಡಿಕಾರಿದ್ದಾರೆ.

ಈ ಘಟನೆಯ ಹಿಂದೆ ಪೊಲೀಸ್ ಗುಪ್ತದಳ ವೈಫಲ್ಯವಾಗಿರಲಿಲ್ಲವೇ ಎಂಬುದು ಪ್ರತ್ಯೇಕ ಪ್ರಶ್ನೆಯಾಗುತ್ತದೆ. ಗುಪ್ತದಳ ಸಹ ತನ್ನ ಕರ್ತವ್ಯವನ್ನು ಮೆರೆಯಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ