ವಿಮ್ಸ್ ಆಸ್ಪತ್ರೆ ವೈದ್ಯ ದೇವಾನಂದ ನಿವಾಸದ ಮೇಲೆ ಲೋಕಾಯುಕ್ತ ದಾಳಿ

ಬುಧವಾರ, 29 ಜನವರಿ 2014 (13:16 IST)
PR
PR
ವಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ದೇವಾನಂದ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳನ್ನು ಪತ್ತೆಹಚ್ಚಿದ್ದಾರೆ. 1.83 ಕೋಟಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆಂದು ತಿಳಿದುಬಂದಿದೆ. ದೇವಾನಂದ ವಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕರಾಗಿದ್ದರು. ಪ್ರಸ್ತುತ ಅರಿವಳಿಕೆ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಳ್ಳಾರಿಯ ಹವಂಭಾವಿ ರಸ್ತೆಯಲ್ಲಿ ಅವರ ನಿವಾಸವಿದೆ.

ಲೋಕಾಯುಕ್ತ ಎಸ್ಪಿ ಸಿದ್ದಲಿಂಗಣ್ಣನವರ ನೇತೃತ್ವದಲ್ಲಿ ಈ ದಾಳಿ ನಡೆಯಿತೆಂದು ತಿಳಿದುಬಂದಿದೆ. ದಾಳಿಯ ಸಂದರ್ಭದಲ್ಲಿ 330 ಗ್ರಾಂ ಚಿನ್ನಾಭರಣ, 1.25 ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದು, ದೇವಾನಂದ ಅವರ ನಿವಾಸ ಸುಮಾರು ಒಂದು ಕೋಟಿ ರೂ. ಮೌಲ್ಯದ್ದೆಂದು ಅಂದಾಜು ಮಾಡಲಾಗಿದೆ. ಮನೆಯಲ್ಲಿದ್ದ 3 ಲಕ್ಷ ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಿರೇಹಾಳ್ ಗ್ರಾಮದಲ್ಲಿ 15 ಎಕರೆ ಜಮೀನು ಪತ್ತೆಯಾಗಿದೆ. ಬ್ಯಾಂಕ್‌ನಲ್ಲಿ 70 ಲಕ್ಷ ಡಿಪಾಸಿಟ್ ಇಟ್ಟಿರುವುದು ದಾಖಲೆಗಳಿಂದ ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ