ಹಾಲಿ ಶಾಸಕರೆಲ್ಲರಿಗೂ ಟಿಕೇಟ್ ನೀಡಲು ನಿರ್ಧರಿಸಿದ ಕಾಂಗ್ರೆಸ್

ಭಾನುವಾರ, 31 ಮಾರ್ಚ್ 2013 (10:10 IST)
PR
PR
ವಿಧಾನಸಭಾ ಚುನಾವಣೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಿದ್ದು, ಏಪ್ರಿಲ್ ಮೊದಲನೆ ವಾರದಲ್ಲಿ ಪಟ್ಟಿ ಪ್ರಕಟಿಸುವ ಸಾಧ್ಯತೆಗಳಿವೆ.

ಶನಿವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಪ್ಪತ್ತು ಮಂದಿ ಹಾಲಿ ಶಾಸಕರಿಗೂ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಕ್ರಿಮಿನಲ್ ಮೊಕದ್ದಮೆಗಳಲ್ಲಿ ಸಿಲುಕಿರುವವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಏಪ್ರಿಲ್ ಮೊದಲನೆ ವಾರದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡುವ ಬಗ್ಗೆ ಸ್ಥಳೀಯ ಮುಖಂಡರಿಂದ ಮಾಹಿತಿ ಪಡೆದು ಪರಿಶೀಲಿಸಿದ್ದು, ಅವರೆಲ್ಲರೂ ಗೆಲ್ಲುವ ಸಾಧ್ಯತೆಗಳಿರುವುದರಿಂದ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ, ನಾಲ್ಕು ಮಂದಿ ಪಕ್ಷೇತರ ಶಾಸಕರಿಗೂ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.

ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಮೊಕದ್ದಮೆ ಎದುರಿಸುತ್ತಿರುವವರಿಗೆ ಟಿಕೆಟ್ ನೀಡಲಾಗುವುದಿಲ್ಲ. ಯುವಕರು, ಮಹಿಳೆಯರು, ಎಸ್ಸಿ-ಎಸ್ಟಿ, ಹಿಂದುಳಿದವರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ರಾಜ್ಯದ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತ್ಯಗೊಂಡಿದೆ ಎಂದು ಪರಮೇಶ್ವರ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ