ಅಕ್ರಮ ರಸ್ತೆ; ಬೋಪಯ್ಯ ವಿರುದ್ಧ ಕ್ರಮಕ್ಕೆ ಸಿಇಸಿ ಶಿಫಾರಸು

ಮಂಗಳವಾರ, 28 ಫೆಬ್ರವರಿ 2012 (11:10 IST)
PR
ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಘೋಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆಗಳನ್ನ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಕೆ.ಜಿ.ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜೆ.ಮೇದಪ್ಪ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಿ.ವಿ.ಜಯಕೃಷ್ಣನ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮಹತ್ವದ ಶಿಫಾರಸು ಮಾಡಿದೆ.

ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ ಮತ್ತು ತಲಕಾವೇರಿ ಮೀಸಲು ಅರಣ್ಯದೊಳಗೆ ಬೇಕಾದಷ್ಟು ಮರಗಳ ಕಡಿತಲೆ ಮಾಡಿ ರಸ್ತೆಗಳನ್ನು ನಿರ್ಮಿಸುವ ಮೂಲಕ ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಲಾಗಿದೆ.

ಘೋಷಿತ ಅರಣ್ಯದೊಳಗೆ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರಬಾರದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಮಾಡಿರುವ ಆರೋಪ ಕುರಿತು ಪರಿಶೀಲಿಸಿದ ಸಿಇಸಿ ಸೋಮವಾರ ವರದಿ ಸಲ್ಲಿಸಿತು.

ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಸುಮಾರು 224 ಪುಟಗಳ ವರದಿಯಲ್ಲಿ ಕೊಡಗಿನ ಹಿಂದಿನ ಜಿಲ್ಲಾಧಿಕಾರಿ ಬಲದೇವ್ ಕೃಷ್ಣ ಹಾಗೂ ಹಿಂದಿನ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ.ಸುದರ್ಶನ ಅವರ ನಡವಳಿಕೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಇಸಿ, ಇವರ ಮೇಲೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದೆ. ಕಾರ್ಯಪ್ಪ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ.ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ.ಸಿ.ಕೆ.ಪ್ರಸಾದ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಅರಣ್ಯ ಪೀಠವು ಸಿಇಸಿ ವರದಿ ಹಿನ್ನೆಲೆಯಲ್ಲಿ ಸುದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದೆ.

ಪಶ್ಚಿಮಘಟ್ಟದ ಜೀವವೈವಿಧ್ಯತೆಯ ಸೂಕ್ಷ್ಮ ತಾಣಗಳಾಗಿರುವ ಪುಷ್ಪಗಿರಿ, ಬ್ರಹ್ಮಗಿರಿ ಮತ್ತು ತಲಕಾವೇರಿ ಅರಣ್ಯ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಮಡಿಕೇರಿಯಲ್ಲಿ ನಡೆದ ಉನ್ನತ ಅಧಿಕಾರದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಉದ್ದೇಶಿತ ರಸ್ತೆ ನಿರ್ಮಾಣ ತಡೆಯುವಂತೆ ಮನವಿ ಮಾಡಿ ಕಾರ್ಯಪ್ಪ 2008ರ ಡಿಸೆಂಬರ್ 22ರಂದು ಸಿಇಸಿಗೆ ಅರ್ಜಿ ಸಲ್ಲಿಸಿದ್ದರು.

ವೆಬ್ದುನಿಯಾವನ್ನು ಓದಿ