ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಸರಕಾರ ಬದ್ಧ: ಸಿಎಂ

ಬುಧವಾರ, 5 ಜೂನ್ 2013 (11:38 IST)
PR
PR
ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗುಟ್ಕಾಕ್ಕೆ ನಿಷೇಧ ಹೇರಿದ್ದು, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಅಡಿಕೆ ಬೆಲೆ ಕುಸಿತವಾದರೆ ಸರಕಾರ ರೈತರ ನೆರವಿಗೆ ಧಾವಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಯಮ 69ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಭಾ ನಾಯಕರೂ ಆಗಿರುವ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ಆದೇಶವನ್ನು ಸರಕಾರ ಪಾಲಿಸಿದೆ ಎಂದು ಹೇಳಿದರು.

ಗುಟ್ಕಾ, ಪಾನ್‌ ಮಸಾಲಾ ನಿಷೇಧದಿಂದಾಗಿ ರಾಜ್ಯದಲ್ಲಿ ಅಡಿಕೆ ಬೆಲೆ ಕುಸಿತವಾಗಿದೆ ಎಂಬ ವಿಪಕ್ಷ ಸದಸ್ಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಾನು ಅಡಿಕೆ ಬೆಲೆಯ ಬಗ್ಗೆ ಮಾಹಿತಿ ತರಿಸಿದ್ದು, ಅಡಿಕೆ ಬೆಲೆ ಕುಸಿತ ಆಗಿಲ್ಲ. ಗುಟ್ಕಾ ನಿಷೇಧಕ್ಕೆ ಮುನ್ನಾದಿನ ಉತ್ತಮ ದರ್ಜೆಯ ಅಡಿಕೆ ಬೆಲೆ ಕ್ವಿಂಟಾಲ್‌ಗೆ 26 ಸಾವಿರ ರೂ.ಗಳಿದ್ದು, ಜೂ.3ರಂದು 25,976 ರೂ.ಗಳಿವೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಆಮದು ಶುಲ್ಕ ಹೆಚ್ಚಿರುವ ಕಾರಣಕ್ಕೆ ರಾಜ್ಯದಲ್ಲಿ ಅಡಿಕೆಗೆ ಉತ್ತಮ ಬೆಲೆ ಇದೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಸರಕಾರ ಬದ್ಧ ಎಂದ ಅವರು, ಅಡಿಕೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸಮಸ್ಯೆ ಸೃಷ್ಟಿಯಾದರೆ ಅಡಿಕೆ ಬೆಳೆಗಾರರು ಹಾಗೂ ಜನ ಪ್ರತಿನಿಧಿಗಳನ್ನು ಕರೆದು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ಸರಕಾರ ಬದ್ದ ಎಂದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧಿಸಿದ್ದು, ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜನತೆಯ ಆರೋಗ್ಯ ರಕ್ಷಣೆ ಸರಕಾರದ ಆದ್ಯ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ