ಅರಸು ಮನೆ ತೆರವು ಕಾರ್ಯಾಚರಣೆಯಿಂದ ಹುಟ್ಟಿದ ವಿವಾದ

ಬುಧವಾರ, 31 ಜುಲೈ 2013 (14:48 IST)
PR
PR
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಭೂಸುಧಾರಣೆಯ ಹರಿಕಾರ ದೇವರಾಜು ಅರಸು ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಯನ್ನು ತೆರವು ಮಾಡುವ ಕಾರ್ಯಾಚರಣೆ ಈಗ ವಿವಾದಕ್ಕೆ ಎಡೆಮಾಡಿದೆ. ದೇವರಾಜ ಅರಸು ಅವರ ಮನೆ ಮೇಲೆ ಸುಮಾರು 60 ಜನ ರೌಡಿಗಳು ದಾಳಿ ಮಾಡಿದ ಬಳಿಕ ಈಗ ಮನೆ ತೆರವು ನಡೆಸುವ ಕಾರ್ಯಾಚರಣೆ ನಡೆಯುತ್ತಿದೆ.

ಸುಮಾರು ಒಂದು ಎಕರೆ ಒಂದು ಗುಂಟೆಯ ನಿವೇಶನದಲ್ಲಿರುವ ಮನೆಯನ್ನು ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ತಮಗೆ ಮಾರಾಟ ಮಾಡಿದ್ದಾರೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ. 2012ರಲ್ಲಿ ಮನೆಯ ದಾಖಲೆಯನ್ನು ಹಸ್ತಾಂತರ ಮಾಡಿದರು. ಸುಮಾರು 7 ಕೋಟಿ ರೂ. ಕೊಟ್ಟು ನಿವಾಸವನ್ನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಈ ಮನೆಯ ಔಟ್‌ಹೌಸ್‌ನಲ್ಲಿ ವಾಸವಿರುವ ಲಕ್ಷ್ಮಿನಾರಾಯಣ್ ಎಂಬ ಆರ್‌ಟಿಐ ಕಾರ್ಯಕರ್ತರು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರಕ್ಕೆ ಸೇರಬೇಕಾದ ಜಾಗ. ಸರ್ಕಾರ ಈ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಅಪೇಕ್ಷಿಸಿತ್ತು. ಸರ್ಕಾರಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಪಡೆಯುವುದು ಕಾನೂನುಬಾಹಿರ ಎಂದು ಲಕ್ಷ್ಮಿನಾರಾಯಣ್ ಆರೋಪಿಸಿದ್ದಾರೆ.

ನಾನೊಬ್ಬ ಆರ್‌ಟಿಐ ಕಾರ್ಯಕರ್ತ. ಸಮಾಜ ಸೇವಕ, ಸರ್ಕಾರಿ ಜಾಗ ದುರುಪಯೋಗ ಆಗದಂತೆ ನೋಡಿಕೊಳ್ಳುವುದು ತಮ್ಮ ಉದ್ದೇಶ ಎಂದು ಲಕ್ಷ್ಮೀನಾರಾಯಣ್ ಹೇಳಿದ್ದಾರೆ. ಮನೆಯ ಹಸ್ತಾಂತರಕ್ಕೆ ತಾವು ವಿರೋಧ ಸೂಚಿಸಿದಾಗ ತಮ್ಮ ಮೇಲೆ ಪ್ರಭಾ ಮಲ್ಲಿಕಾರ್ಜುನ್ ಕಡೆಯವರು ಹಲ್ಲೆ ಮಾಡಿದ್ದಾರೆಂದು ಕೂಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಅವರ ಸೊಸೆಯಾಗಿದ್ದು, ಮನೆ ಖರೀದಿ ಮಾಡಿ ಕಂದಾಯ ಕಟ್ಟುತ್ತಿರುವ ಬಗ್ಗೆ ದಾಖಲೆಗಳಿವೆ ಎಂದು ಪ್ರಭಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ