ಅರಿಶಿಣ,ಕುಂಕುಮ,ವಿಭೂತಿಗಳಿಗೆ ಮಾತ್ರ ಹಣ:ವಿಶ್ವನಾಥ್‌ ವ್ಯಂಗ್ಯ

ಶನಿವಾರ, 16 ಫೆಬ್ರವರಿ 2013 (15:18 IST)
PR
PR
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೇವಲ ಅರಿಶಿಣ, ಕುಂಕುಮ, ವಿಭೂತಿ ಕೆಲಸಗಳಿಗೆ ಮಾತ್ರ ಹಣ ನೀಡಿದೆ ಎಂದು ವ್ಯಂಗ್ಯವಾಡಿರುವ ಮೈಸೂರು ಸಂಸದ ಹೆಚ್. ವಿಶ್ವನಾಥ್, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಿರುವುದನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಈ ಸರ್ಕಾರ ಯಾವಾಗ ತೊಲಗುತ್ತದೆಯೋ ಎಂದು ಜನರೇ ಹೇಳುವಂತಾಗಿದೆ. ಅಧಿಕಾರ ಕೊಟ್ಟ ಐದು ವರ್ಷಗಳಲ್ಲೇ ರಾಜಕೀಯ ಗೊಂದಲಗಳು, ರಾಜೀನಾಮೆಗಳು, ಬಂಡಾಯ ಹಾಗೂ ಮೂರು ಪಕ್ಷಗಳಾಗಿ ಹೋಳಾಗುವ ಮೂಲಕ ಜನರ ನಂಬಿಕೆಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮುಂಬರುವ ಚುನಾವಣೆ ಹಾಗೂ ಪಕ್ಷದ ಸಂಘಟನೆ ಕುರಿತು ಚರ್ಚಿಸಲು ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಪಕ್ಷದ ಮುಖಂಡರು ದೆಹಲಿಗೆ ಆಹ್ವಾನಿಸಿದ್ದಾರೆಂದ ಅವರು, ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಪರಿಪಾಠ ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

2ಜಿ ಸ್ಪೆಕ್ಟ್ರಂ ಹಗರಣವನ್ನು ಬಿಜೆಪಿ ಎರಡು ಲಕ್ಷ ಕೋಟಿಯ ಹಗರಣವೆಂದು ಬಿಂಬಿಸಿತು. ಆದರೆ ನಂತರ ಕೇವಲ 9 ಸಾವಿರ ಕೋಟಿಯದ್ದು ಎಂದು ತಿಳಿದು ಬಂದಿತು. ಹೀಗೆ ಸುಳ್ಳು ಆರೋಪ ಮಾಡುವ ಬಿಜೆಪಿ, ದೇಶದಲ್ಲಿಯೇ ಕರ್ನಾಟಕದಲ್ಲಿ ದುರಾಡಳಿತ, ಭ್ರಷ್ಟ ಸರಕಾರ ಎಂಬ ಕುಖ್ಯಾತಿ ಪಡೆದಿದೆ ಎಂಬುದನ್ನು ಮರೆತಂತಿದೆ ಎಂದು ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ