ಆಡ್ವಾಣಿ ರಥಯಾತ್ರೆ: ಯುವ ಕಾಂಗ್ರೆಸ್‌ನಿಂದ ಅಣಕು ಪ್ರದರ್ಶನ

ಶನಿವಾರ, 29 ಅಕ್ಟೋಬರ್ 2011 (14:32 IST)
ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಜಮೀನು ಡಿನೋಟಿಫಿಕೇಶನ್‌ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಬಂಧನದ ವಾರೆಂಟ್‌ ಹೊರಡಿಸಿದ್ದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಆತ್ಮಾವಲೋಕನ ಸಭೆ ನಡೆಸುತ್ತಿದ್ದ ಕಾಂಗ್ರೆಸ್‌ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದ್ದರು. ಇದೀಗ ಯುವ ಕಾಂಗ್ರೆಸ್‌ ಕಾರ್ಯಕರ್ತರು ಆಡ್ವಾಣಿ ಅವರ ಜನಚೇತನ ರಥ ಯಾತ್ರೆಯ ಅಣಕು ಪ್ರದರ್ಶನ ನಡೆಸುವ ಮೂಲಕ ತಮ್ಮ ನಾಯಕರನ್ನು ಅನುಸರಿಸುತ್ತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬಿಜೆಪಿ ಮುಖಂಡ ಎಲ್‌.ಕೆ.ಆಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಆರಂಭಿಸಿರುವ ಜನ ಚೇತನ ಯಾತ್ರೆ ಅಕ್ಟೋಬರ್‌ 30 ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಆಡ್ವಾಣಿ ಅವರ ರಥ ಯಾತ್ರೆಯ ಅಣಕು ಪ್ರದರ್ಶನವನ್ನು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮೌರ್ಯ ಹೋಟೆಲ್‌ ಬಳಿ ಶನಿವಾರ ನಡೆಸಿದರು.

ಆಡ್ವಾಣಿ ಅವರು ರಥಯಾತ್ರೆಯಿಂದ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಆಗಮಿಸಿ ಭ್ರಷ್ಟಾಚಾರದ ಆರೋಪದ ಮೇರೆಗೆ ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ ಅವರನ್ನು ಭೇಟಿ ಮಾಡಿ ಗುಲಾಬಿ ಹೂ ನೀಡಿ ಅಭಿನಂದಿಸುವ ದೃಶ್ಯವನ್ನು ಬಿಜೆಪಿ ನಾಯಕರ ಮುಖವಾಡ ಧರಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಅಭಿನಯಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ನಡೆಸಿದ ಅಣಕು ಪ್ರದರ್ಶನದಲ್ಲಿ ಕಾಂಗ್ರೆಸ್‌ನ ಸ್ಥಳೀಯ ಕಾರ್ಪೋರೇಟರ್‌ಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ಪಕ್ಷದ ಹಿರಿಯ ಮುಖಂಡರು ಹಾಜರಿರಲಿಲ್ಲ.

ಆಡ್ವಾಣಿ ರಥ ಯಾತ್ರೆ, ಪರಪ್ಪನ ಅಗ್ರಹಾರ ಮಾದರಿಯ ಜೈಲು ಹಾಗೂ ಜೈಲಿನಲ್ಲಿರುವ ಯಡಿಯೂರಪ್ಪ, ಕಟ್ಟಾ, ಕೃಷ್ಣಯ್ಯ ಶೆಟ್ಟಿ ಹಾಗೂ ಅವರನ್ನು ಅಭಿನಂದಿಸುವ ಆಡ್ವಾಣಿ ಮುಖವಾಡ ಧರಿಸಿ ನಡೆಸಿದ ಅಣಕು ಪ್ರದರ್ಶನವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಯಡಿಯೂರಪ್ಪ- ಕುಮಾರಸ್ವಾಮಿ ಅಣಕು ಪ್ರದರ್ಶನ
ಭ್ರಷ್ಟಾಚಾರ ಪ್ರಕರಣಗಳ ಸಂಬಂಧ ಧರ್ಮಸ್ಥಳದ ಮಂಜುನಾಥ ಸ್ವಾಮಿ ಎದುರು ಆಣೆ ಪ್ರಮಾಣ ಮಾಡುವುದಾಗಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವೆ ನಡೆದ ವಾದವಿವಾದಗಳನ್ನೂ ಸಹಾ ಯುವ ಕಾಂಗ್ರೆಸ್‌ ಕಾರ್ಯಕರ್ತರು ಅಣಕು ಪ್ರದರ್ಶನ ನಡೆಸಿದ್ದರು.

ಕಾಂಗ್ರೆಸ್‌ ಸಂಸ್ಕೃತಿಗೆ ಎಚ್‌ಡಿಕೆ ವಿರೋಧ
ಇಬ್ಬರೂ ನಾಯಕರ ಮುಖವಾಡ ಧರಿಸಿದವರು ಗೋಲಿಯಾಡುವ ಮೂಲಕ ನಡೆಸಿದ ಅಣಕು ಪ್ರದರ್ಶನಕ್ಕೆ ಜೆಡಿಎಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಅಣಕ ಮಾಡುವುದು ಕಾಂಗ್ರೆಸ್‌ ಸಂಸ್ಕೃತಿ ಎಂದು ತಿರುಗೇಟು ನೀಡಿದ್ದರು.

ವೆಬ್ದುನಿಯಾವನ್ನು ಓದಿ